ಉಡಚಾಣ ಹುಚ್ಚಲಿಂಗೇಶ್ವರ ಜಾತ್ರೆ ರದ್ದು

ಅಫಜಲಪುರ:ಮಾ.15: ದೇಶದಲ್ಲಿ 2ನೇ ಬಾರಿಗೆ ವ್ಯಾಪಿಸಿರುತ್ತಿರುವ ಕೋವಿಡ್-19 ಮಹಾಮಾರಿ ತಡೆಗಟ್ಟಲು ಸರ್ಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಈ ಬಾರಿ ನಡೆಯಲಿರುವ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲು ಗ್ರಾಮಸ್ಥರು ಹಾಗೂ ದೇವಸ್ಥಾನ ಕಮಿಟಿಯ ಸದಸ್ಯರು ಸಹಕರಿಸಬೇಕು ಎಂದು ಪಿಎಸ್‍ಐ ವಿಶ್ವನಾಥ ಮುದರಡ್ಡಿ ಮನವಿ ಮಾಡಿದರು.
ತಾಲೂಕಿನ ಉಡಚಾಣ ಗ್ರಾಮದಲ್ಲಿ ಮಾರ್ಚ್ 17 ರಿಂದ 19 ರವರೆಗೆ ಜರುಗಲಿರುವ ಶ್ರೀ ಹುಚ್ಚಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸುವ ಕುರಿತು ಗ್ರಾಮಸ್ಥರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಕೋವಿಡ್-19 ನಿರ್ಮೂಲನೆಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ನಡೆಯುವ ಉರುಸ್ ಹಾಗೂ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಕೋವಿಡ್‍ನ 2 ಅಲೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಆಳಂದ ತಾಲೂಕಿನ ಹಿರೋಳಿ, ಖಜೂರಿ, ನಿಂಬಾಳ ಹಾಗೂ ಅಫಜಲಪುರ ತಾಲೂಕಿನ ಬಳೂರ್ಗಿ, ಮಾಶಾಳದಲ್ಲಿ ಚೆಕ್‍ಪೋಸ್ಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕೋವಿಡ್-19 ರೋಗದ 72 ಗಂಟೆಯ ಬಳಗಿನ ನೆಗೆಟಿವ್ ವರದಿ ಹೊಂದದೆ ಇರುವಂತಹ ವ್ಯಕ್ತಿಗಳನ್ನು ಕಲಬುರಗಿ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ನೀಡಿರುವ ನಿರ್ದೇಶನ ಹಾಗೂ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಬಳಿಕ ಗ್ರಾಮಸ್ಥರು ಹಾಗೂ ದೇವಸ್ಥಾನ ಕಮಿಟಿಯ ಸದಸ್ಯರು ಪ್ರತಿಕ್ರಿಯಿಸಿ, ಕೋವಿಡ್ ತಡೆಗಟ್ಟಲು ಈ ಬಾರಿ ನಡೆಯಲಿರುವ ಜಾತ್ರಾ ಮಹೋತ್ಸವವನ್ನು ಸರ್ಕಾರದ ಆದೇಶದ ಮೇರೆಗೆ ರದ್ದುಗೊಳಿಸಿ ಇಲಾಖೆಗೆ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜಯ ಸಲಗರ,ತಾಪಂ ಸದಸ್ಯ ಶರಣು ಪಡಶೇಟ್ಟಿ,ಟ್ರಸ್ಟ್ ಅಧ್ಯಕ್ಷ ಸಿದ್ಧಾರ್ಥ ಮೈದರ್ಗಿ, ಗ್ರಾಪಂ ಉಪಾಧ್ಯಕ್ಷ ಸೋಮನಾಥ ಮಸೂತಿ, ಅಕ್ಷಯ ಸಲಗರ, ಶರಣಬಸಪ್ಪ ಮೇತ್ರಿ, ಸುರೇಶ ಅಂಬಿಗರ, ಪರಮೇಶ್ವರ ಬಂಡಾರಿ, ಜಗನ್ನಾಥಸಂಗವಿ, ಶಾಮರಾಯಅಡವಿ, ಖಲೀಮ್ ಬಡದಾಳ, ಬಸವರಾಜ ಬೂಶೇಟ್ಟಿ, ವಿಶ್ವನಾಥ ಮಡಪತಿ, ನಿಂಗಪ್ಪ ಕಣ್ಣಿ, ಈರಣ್ಣ ಪಡಶೇಟ್ಟಿ, ವಿಠ್ಠಲ್ ಕಡಲಾಜಿ, ತುಳಜಪ್ಪ ಕಲಶೇಟ್ಟಿ, ರಾಜಕುಮಾರ ನಲಬೇರಿ, ಪುಟ್ಟು ಕಾಳೆ ಸೇರಿದಂತೆ ಇನ್ನಿತರು ಭಾಗವಹಿಸಿದರು.