ಉಜ್ವಲಾಗೆ ರಾಜ್ಯಮಟ್ಟದ ನೃಪತುಂಗ ಪ್ರಶಸ್ತಿ

ಬೀದರ್:ನ.6: ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ (ಕೆ) ಸಮೀಪದ ಕಾರಂಜಾ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಜ್ವಲಾ ಸಂಜಯಕುಮಾರ ಡಾಕುಳಗಿ ಅವರು ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಅಮೋಘ ವರ್ಷ ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ. ಉಜ್ವಲಾ, ಎರಡು ದಶಕದಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಬೋಧನೆಗಾಗಿ ಅವರಿಗೆ ಸರ್ಕಾರಿ ಶಾಲಾ ಶಿಕ್ಷಕರ ವೃಂದದ ಉತ್ತಮ ಶಿಕ್ಷಕಿ ಸದ್ಭಾವನಾ ಪ್ರಶಸ್ತಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಸೇರಿ ಅನೇಕ ಪ್ರಶಸ್ತಿ, ಸಮ್ಮಾನಗಳು ಒಲಿದಿವೆ.

ಪ್ರಶಸ್ತಿ ಪ್ರದಾನ: ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಸಂಭ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಅವರು ರಾಜ್ಯಮಟ್ಟದ ಅಮೋಘ ವರ್ಷ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಿದರು.