ಉಜ್ಜಿನಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.26: ಉಜ್ಜಿನಿ ಸದ್ಧರ್ಮ ಪೀಠದ ಶ್ರೀ ಮರುಳಸಿದ್ಧಶ್ವರ ಸ್ವಾಮಿಯ ರಥೋತ್ಸವವು ಮಂಗಳವಾರ ಸಂಜೆ 6.36 ವೇಳೆಗೆ ಅಸಂಖ್ಯಾತ ಭಕ್ತಸ್ತೋಮದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀಸ್ವಾಮಿಯ ಪಟಾಕ್ಷಿಯನ್ನು 3.50 ಲಕ್ಷ ರೂ.ಗೆ ಹಂಪನೂರ ರೇವಣಸಿದ್ದಪ್ಪ ಸವಾಲಿನಲ್ಲಿ ಸ್ವೀಕರಿಸಿದರು.
ಸವಾಲು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನೆರೆದ ಭಕ್ತರ ಸಮ್ಮುಖದಲ್ಲಿ, ನಾಡಿನಲ್ಲಿ ಮಳೆಬೆಳೆ ಸಮೃದ್ಧವಾಗಿ ರೈತರ ಬದುಕು ಅಸನಾಗಿ, ನಾಡಿನ ಸದ್ಬಕ್ತರಿಗೆ ಸನ್ಮಂಗಲ ಉಂಟಾಗಲಿ ಎಂದು ಆಶಿರ್ವಚನ ನೀಡಿ ಸಂಭ್ರಮದ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆ ಹಣ್ಣು, ಉತ್ತುತ್ತಿ,ಧವನ ಎಸೆದು ಮುಗಿಲು ಮುಟ್ಟುವಂತೆ ಜಯ ಘೋಷ ಕೂಗಿದರು.
ರಥವು ಸಾಗುವ ಮುನ್ನ ಉತ್ಸವದ ಮೂರ್ತಿಗೆ ಶ್ರೀಮಠದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿಕೊಂಡು ಉತ್ಸವ ಮೂರ್ತಿಯನ್ನು 6 ಗಂಟೆ ಸರಿಸುಮಾರಿಗೆ ಗರ್ಭಗುಡಿಯಿಂದ ಹೊರಗೆ ತಂದು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ರಥದ ಬಳಿ ಭಕ್ತರು ಸಂಭ್ರಮದಿಂದ ಹೊತ್ತು ತಂದರು.
ಶ್ರೀಸ್ವಾಮಿಯ ಪಲ್ಲಕ್ಕಿ ಉತ್ಸವವು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ರಥದ ಮೇಲೇರುಸುತ್ತಿದ್ದಂತೆ ಭಕ್ತರು ಹರ್ಷೋದ್ಗಾರದೊಂದಿಗೆ ಬಾಳೆ ಹಣ್ಣು, ಉತ್ತುತ್ತಿ ದವನ ಎಸೆದು ಭಕ್ತಿ ಸಮರ್ಪಿಸಿದರು.
ನಂತರ ರಥೋತ್ಸವವು ಪಾದಗಟ್ಟೆಯವರೆಗೆ ರಾಜ ಗಾಂಭೀರ್ಯದಿಂದ ಸಾಗಿ ಮತ್ತೆ ಮರಳಿ ಸಹಸ್ರಾರು ಭಕ್ತರು ಜಯಘೋಷದೊಂದಿಗೆ ಮೂಲಸ್ಥಾನಕ್ಕೆ ಎಳೆದೊಯ್ದರು.
ರಥೋತ್ಸವ ಮೂಲಸ್ಥಾನಕ್ಕೆ ನಿಲ್ಲುತ್ತಿದ್ದಂತೆ ಭಕ್ತರು ಸಂಭ್ರಮದಿಂದ ಜಯಕಾರ ಹಾಕಿ ಭಕ್ತರು ಭಕ್ತಸಮರ್ಪಿಸಿದರು, ಮತ್ತೆ ಉತ್ಸವ ಮೂರ್ತಿಯನ್ನು ಶ್ರೀಮಠಕ್ಕೆ ಮೆರವಣಿಗೆ ಮೂಲಕ ಹೊತ್ತೊಯ್ಯಲಾಯಿತು.
ರಥೋತ್ಸವ ಚಾಲನೆ ವೇಳೆ ಕೂಡ್ಲಿಗಿ ಪ್ರಶಾಂತ್ ಸಾಗರ ಶಿವಾಚಾರ್ಯ ಸ್ವಾಮಿ,ಹರಪನಹಳ್ಳಿ ತಗ್ಗಿನಮಠದ ಸ್ವಾಮಿ, ಹಡಗಲಿ ಹಾಲಸ್ವಾಮಿಗಳು ಸೇರಿದಂತೆ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

One attachment • Scanned by Gmail