ಉಜ್ಜಯಿನಿ ಸ್ಥಿರ ಪಟ್ಟಾಧ್ಯಕ್ಷ ಜ.ತ್ರಿಲೋಚನ ಶಿವಾಚಾರ್ಯರಿಗೆ ಮಾನ್ಯತೆ

ಲಕ್ಷ್ಮೇಶ್ವರ,ನ14 ವೀರಶೈವ ಪಂಚಪೀಠಗಳ ಒಕ್ಕೂಟ ವ್ಯವಸ್ಥೆ ಸಂವರ್ಧನೆಗಾಗಿ ಸಂಸ್ಥಾಪಿತಗೊಂಡ ಜ.ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯಿಂದ ಧಾರ್ಮಿಕ ಪರಂಪರೆ ಮತ್ತು ಕಾನೂನಾತ್ಮಕ ಮೂಲ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಉಜ್ಜಯಿನಿ ಸ್ಥಿರ ಪಟ್ಟಾಧ್ಯಕ್ಷ ಜ.ತ್ರಿಲೋಚನ ಶಿವಾಚಾರ್ಯರಿಗೆ ಮಾನ್ಯತೆ ದೊರಕಿಸಿ ಕೊಡಲಾಗಿದೆ’ ಎಂದು ಹಿಮವತ್ಕೇದಾರ ಜ.ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸಮೀಪದ ಮುಕ್ತಿಮಂದಿರದಲ್ಲಿ ಲಿಂ.ರಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆ ಆವರಣದಲ್ಲಿ ಶುಕ್ರವಾರ ನಡೆದ ಶಕ್ತಿ ಸಂವರ್ಧನ ಸಂಕಲ್ಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ವೀರಶೈವ ಪಂಚಪೀಠಗಳಿಗೆ ಇತಿಹಾಸ, ಪರಂಪರೆ ಇದೆ. ಪ್ರತಿಯೊಂದು ಪೀಠಗಳಿಗೆ ತಮ್ಮದೇ ಆದ ಗೊತ್ತು ಗುರಿಗಳಿವೆ. ಧರ್ಮಪೀಠಗಳ ಪವಿತ್ರ ಪರಂಪರೆ, ಗೌರವ ಘನತೆಗಳನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ವೇದಾಂತಿಗಳಿಂದ ಸಾಧ್ಯವಿಲ್ಲ ಎಂಬುದು ಈಚಿನ ವರ್ಷಗಳಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ. ಪಂಚಪೀಠಗಳ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಲು ಕಾಶಿ ಜಗದ್ಗುರು ಕಾರಣ ಎಂಬುದು ಸೂರ್ಯ ಪ್ರಕಾಶದಷ್ಟು ಸತ್ಯ. ಇದನ್ನು ಸರಿಪಡಿಸಲು ರಂಭಾಪುರಿ ಜಗದ್ಗುರುಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಉಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಉಪಕೃತರಾದ ಕಾಶಿ ಜಗದ್ಗುರುಗಳು ಅವರೇ ಬರೆದಿಟ್ಟು ಪರಿಪೂರ್ಣ ಕಾರ್ಯ ನೆರವೇರಿಸಿದ್ದು ಗೊತ್ತಿದ್ದರೂ ಅದನ್ನು ಉಲ್ಲಂಘಿಸಿ ದಾರಿ ತಪ್ಪಿ ನಡೆದದ್ದು ನೋವಿನ ಸಂಗತಿ. ಲಿಂ.ಉಜ್ಜಯಿನಿ ಜಗದ್ಗುರು ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬರೆದಿಟ್ಟಿದ್ದನ್ನು ಅಲ್ಲಗಳೆಯುವುದು ಯಾರಿಗೂ ಸಾಧ್ಯವಿಲ್ಲ. ಧಾರ್ಮಿಕ ಮತ್ತು ಕಾನೂನಾತ್ಮಕ ಸ್ಪಷ್ಟವಾದ ನಿಲುವು ತಾಳಿದ್ದನ್ನು ಪರಾಮರ್ಶಿಸಿ ಸುದೀರ್ಘ ಚರ್ಚೆ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ನಿರ್ಧಾರ ಮಾಡಿ ಇಂದು ಮುಕ್ತಿಮಂದಿರ ಕ್ಷೇತ್ರದಲ್ಲಿ ಶಕ್ತಿ ಸಂವರ್ಧನ ಸಂಕಲ್ಪ ಸಮಾರಂಭ ನೆರವೇರಿಸಿ ಸಂಸ್ಥೆಯ ಸದಸ್ಯತ್ವ ಹಾಗೂ ಉಜ್ಜಯಿನಿ ಸ್ಥಿರ ಪಟ್ಟಾಧ್ಯಕ್ಷ ಸ್ಥಾನಕ್ಕೆ ಮಾನ್ಯತೆ ನೀಡಲಾಗಿದೆ. ಉಜ್ಜಯಿನಿ ಸ್ಥಿರ ಪಟ್ಟಾಧ್ಯಕ್ಷ ಜಗದ್ಗುರು ತ್ರಿಲೋಚನ ಶಿವಾಚಾರ್ಯ ಮಹಾಸ್ವಾಮಿಗಳಲ್ಲಿ ಪೀಠದ ಮೂಲ ಚಿನ್ನದ ಕಿರೀಟ, ಎರಡು ಮುದ್ರಾ ಉಂಗುರ ಹಾಗೂ ಹಲವಾರು ದಾಖಲೆ ಪತ್ರ ಇರುವುದನ್ನು ಕಾಣಬಹುದು’ ಎಂದರು.
ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ ‘ಪರಂಪರೆ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಪಂಚಪೀಠಗಳಿಗೆ ಗೌರವ ಘನತೆ ತಂದು ಕೊಟ್ಟ ಲಿಂ.ರಂ. ವೀರಗಂಗಾಧರ ಜಗದ್ಗುರುಗಳ ಪವಿತ್ರ ಗದ್ದುಗೆಯ ಆವರಣದಲ್ಲಿ ಶಕ್ತಿ ಸಂವರ್ಧನ ಸಂಕಲ್ಪ ಸಮಾರಂಭ ಜರುಗುತ್ತಿರುವುದು ಸಂತೋಷದ ಸಂಗತಿ. ಸತ್ಯಕ್ಕೆ ಮತ್ತು ಧರ್ಮಕ್ಕೆ ಜಯವಾಗಬೇಕು. ಉನ್ನತ ಗುರುಪೀಠ ಸ್ಥಾನ ಅಲಂಕರಿಸಿ ಕಾನೂನು ಮತ್ತು ಧರ್ಮಬಾಹಿರ ಚಟುವಟಿಕೆ ಯಾರೂ ಮಾಡಬಾರದು. ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ ಅಧ್ಯಕ್ಷರಾದ ಕೇದಾರ ಜಗದ್ಗುರುಗಳು ತೆಗೆದುಕೊಂಡ ನಿಲುವಿಗೆ ರಂಭಾಪುರಿ ಪೀಠದ ಒಪ್ಪಿಗೆ ಇದೆ’ ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರು ಮತ್ತು ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿ, ನಿರೂಪಿಸಿದರು.
**