ಉಜಿರೆಯಲ್ಲಿ ಪಾಕ್ ಪರ ಘೋಷಣೆ: ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಡಿ.31:ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಗ್ರಾಮ ಪಂಚಾಯಿತಿಗಳ ಮತ ಎಣಿಕೆಯ ಸಂದರ್ಭದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದ್ದರಿಂದ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಶ್ರೀರಾಮಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಉಜಿರೆ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯ ಸಂದರ್ಭದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ದೇಶದ್ರೋಹಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಮಾಧ್ಯಮಗಳಲ್ಲಿಯೂ ಸಹ ಪ್ರಸಾರವಾಗಿದೆ. ಇಂತಹ ಘೋಷಣೆ ಹಾಕಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಮಾಡಿರುವ ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಪದೇ ಪದೇ ದೇಶದ್ರೋಹ ಕೆಲಸವನ್ನು ಮಾಡುತ್ತಿರುವವರ ವಿರುದ್ಧ ದೇಶದ್ರೋಹ ಪ್ರಕರಣದಡಿ ಬಂಧಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ ಅವರು, ದೇಶ ದ್ರೋಹದ ಘೋಷಣೆ ಕೂಗಲು ಯಾರು ಹುನ್ನಾರ ನಡೆಸಿದ್ದಾರೆ ಅವರ ಕುರಿತೂ ಪ್ರಕರಣ ದಾಖಲಿಸಿ ಅವರನ್ನೂ ಸಹ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಎಚ್. ಗೊಬ್ಬೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾನೂನು ಸಲಹೆಗಾರರು ಹಾಗೂ ನ್ಯಾಯವಾದಿ ಚಂದ್ರಕಾಂತ್ ಕಾಳಗಿ, ಶಶಿಕಾಂತ್ ಆರ್. ದೀಕ್ಷಿತ್, ಸಚಿನ್ ಕುಮಸಿ, ಮಲ್ಲು ಮೋರಟಗಿ, ರಮೇಶ್ ದೇಸಾಯಿ, ಮಹೇಶ್ ಡಿ. ಯಾದವ್, ಮಹೇಶ್ ಕೆಂಭಾವಿ, ಬಸವರಾಜ್ ಮೇತ್ರಿ, ಭರತ್ ವಾಘಮೋರೆ, ಗುಂಡು ಪಾಟೀಲ್, ಅರುಣ್ ಸುಲ್ತಾನಪೂರ್, ಆನಂದ್ ಶೆಟ್ಟಿ, ಸುದೀಪ್ ಕಡೇಚೂರ್, ಮಲ್ಲಿಕಾರ್ಜುನ್ ಹುಲಿಮನಿ, ವಿಕಾಸ್ ಕುಮಸಿ, ಮಹಾದೇವ್ (ಮ್ಯಾಡಿ), ಈಶ್ವರ್ ಹಿಪ್ಪರಗಿ ಮುಂತಾದವರು ಪಾಲ್ಗೊಂಡಿದ್ದರು.