ಉಚ್ಛ ನ್ಯಾಯಾಲಯದಲ್ಲಿ ಗೆದ್ದ ಬಿಸಿಎಂ ಅಧಿಕಾರಿ ಸಂಗಾ: ದೇವಿಂದ್ರಪ್ಪ ಬಿರಾದಾರಗೆ ದಂಡ

ಕಲಬುರಗಿ.ಫೆ.23:ತೀವ್ರ ವಿವಾದಕ್ಕೆ ಗುರಿಯಾಗಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನೇಮಕದ ಕುರಿತಂತೆ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಇಲಾಖೆಯ ಅಧಿಕಾರಿ ರಮೇಶ್ ಜಿ. ಸಂಗಾ ಅವರ ಪರ ತೀರ್ಪು ಬಂದಿದ್ದು, ಎದುರಾಳಿ ದೇವಿಂದ್ರಪ್ಪ ಎಸ್. ಬಿರಾದಾರ್ ಅವರಿಗೆ ಉಚ್ಛ ನ್ಯಾಯಾಲಯವು 5000ರೂ.ಗಳ ದಂಡ ವಿಧಿಸಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ್ ಜಿ. ಸಂಗಾ ಅವರ ಕಾನೂನು ಬಾಹಿರ ವರ್ಗಾವಣೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಕಳೆದ 2020ರ ಅಕ್ಟೋಬರ್ 20ರಂದು ವರ್ಗಾವಣೆಯಾಗಿದ್ದು ರದ್ದುಪಡಿಸಿ ತೀರ್ಪು ನೀಡಿತ್ತು. ಸದರಿ ತೀರ್ಪು ಪ್ರಶ್ನಿಸಿ ದೇವಿಂದ್ರಪ್ಪ ಎಸ್. ಬಿರಾದಾರ್ ಹಾಗೂ ತಂಡದವರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಕಳೆದ ಫೆಬ್ರವರಿ 16ರಂದು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಅವರ ಅರ್ಜಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯಾಲಯವು ಕೆಎಟಿ ತೀರ್ಪಿನ ಆದೇಶವನ್ನು ಎತ್ತಿ ಹಿಡಿಯಿತು.
ಅವೈಜ್ಞಾನಿಕವಾಗಿ ದೇವಿಂದ್ರಪ್ಪ ಎಸ್. ಬಿರಾದಾರ್ ಅವರು ಸಲ್ಲಿಸಿರುವ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯವು ತಿರಸ್ಕರಿಸಿ 5000ರೂ.ಗಳ ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೇ ನ್ಯಾಯಾಲಯವು ದೇವಿಂದ್ರಪ್ಪ ಎಸ್. ಬಿರಾದಾರ್ ಅವರು ಹದಿನೈದು ದಿನಗಳೊಳಗೆ 5000ರೂ.ಗಳ ದಂಡದ ಮೊತ್ತವನ್ನು ಪಾವತಿಸಲು ಸೂಚಿಸಿದೆ.
ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ, ಕೋವಿಡ್ ಭೀತಿಯ ಸಂದರ್ಭದಲ್ಲಿಯೇ ಸಮರ್ಪಕ ಕಾರ್ಯವನ್ನು ಕೈಗೊಂಡಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ್ ಸಂಗಾ ಅವರ ವರ್ಗಾವಣೆಯ ಯತ್ನವನ್ನು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಸಂಗಾ ಅವರು ಬಹಿರಂಗವಾಗಿಯೇ ಮಾಡಿದ್ದರು. ಈ ಕುರಿತು ಸಾಕಷ್ಟು ಗಲಾಟೆ ಸಹ ಆಗಿತ್ತು. ರೇವೂರ್ ಅವರ ಮೂವರು ಬೆಂಬಲಿಗರು ಬೆದರಿಕೆಯ ಕರೆಗಳನ್ನೂ ಸಹ ಮಾಡಿದ್ದರು. ಅದನ್ನು ಸಮರ್ಥವಾಗಿ ಎದುರಿಸಿದ ಸಂಗಾ ಅವರು ಮೂವರ ವಿರುದ್ಧ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ದೂರು ಸಲ್ಲಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಅಂದುಕೊಂಡಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನಾಗಿ ದೇವಿಂದ್ರಪ್ಪ ಎಸ್. ಬಿರಾದಾರ್ ಅವರಿಗೆ ನೇಮಕ ಮಾಡಲಾಯಿತು. ಇದರಿಂದ ಕುಪಿತಗೊಂಡ ರಮೇಶ್ ಸಂಗಾ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಮೂಲಕ ತಡೆಯಾಜ್ಞೆಯನ್ನು ತೆಗೆದುಕೊಂಡು ಬಂದರು. ಆದಾಗ್ಯೂ, ಬಿರಾದಾರ್ ಅವರು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರು. ಅಷ್ಟರೊಳಗೆ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಸಾಕಷ್ಟು ಗಲಾಟೆಯನ್ನೂ ಸಹ ಮಾಡಿಕೊಂಡರು. ಈಗ ಸರ್ವೋಚ್ಛ ನ್ಯಾಯಾಲಯವು ಕೆಎಟಿ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಸಂಗಾ ಅವರ ಪರ ತೀರ್ಪು ನೀಡುವ ಮೂಲಕ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ.