ಉಚಿತ ಹೃದಯ ತಪಾಸಣಾ ಶಿಬಿರದ ಮೂಲಕ ಹನ್ನೆರಡನೇ ವರ್ಷಾಚರಣೆ ಆಚರಿಸಿಕೊಂಡ ಯುನೈಟೆಡ್ ಆಸ್ಪತ್ರೆ

ಕಲಬುರಗಿ:ಫೆ.19: ಕಲ್ಯಾಣ ಕರ್ನಾಟಕದ ಮುಂಚೂಣಿ ಮಲ್ಟಿ ಸ್ಪೇಷಾಲಿಟಿ ಆರೋಗ್ಯ ಕೇಂದ್ರವಾದ ಯುನೈಟೆಡ್ ಆಸ್ಪತ್ರೆಯು ಸೋಮವಾರ ಜನಸಾಮಾನ್ಯರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ತನ್ನ 12ನೇ ವರ್ಷಾಚರಣೆಯನ್ನು ಆಚರಿಸಿಕೊಂಡಿತು.
ಜ್ಯೋತಿ ಬೆಳಗಿಸುವ ಮೂಲಕ ಹೃದಯ ಶಿಬಿರಕ್ಕೆ ಚಾಲನೆ ನೀಡಿದ ಕಲಬುರಗಿ ನಗರದ ಪೊಲೀಸ್ ಕಮೀಷನರ್ ಯುನೈಟೆಡ್ ಆಸ್ಪತ್ರೆಯು ತನ್ನ ಪಯಣದ ಬಹುಮುಖ್ಯ ಮೈಲಿಗಲ್ಲೊಂದನ್ನು ಹೀಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಆಚರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
“ಯುನೈಟೆಡ್ ಆಸ್ಪತ್ರೆಯು ಅತ್ಯುತ್ತಮ ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಡಾ. ವಿಕ್ರಮ್ ಸಿದ್ದಾರೆಡ್ಡಿಯವ ನೇತೃತ್ವದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಯಂತ್ರೋಪಕರಣಗಳು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಳ್ಳುತ್ತಾ ಹನ್ನೆರಡು ವರ್ಷಗಳನ್ನು ಪೂರೈಸಿದ ಈ ಆಸ್ಪತ್ರೆ ಇಂದು ಈ ಭಾಗದ ಅತ್ಯುತ್ತಮ ಆರೋಗ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಆಸ್ಪತ್ರೆಯ ಸಿಬ್ಬಂದಿಯೂ ಕೂಡ ಜನಸ್ನೇಹಿಯಾಗಿದ್ದಾರೆ. ಯಾವುದೇ ರೋಗಿ ಆಸ್ಪತ್ರೆಗೆ ಬಂದಾಗ ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಚೆನ್ನಾಗಿ ಸ್ಪಂದಿಸುತ್ತಾರೆ. ಇಂತಹ ಉತ್ತಮ ಆಸ್ಪತ್ರೆಯೊಂದು ತನ್ನ ಪಯಣದ ಬಹುಮುಖ್ಯ ಮೈಲಿಗಲ್ಲೊಂದನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಉಚಿತ ಹೃದಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದೆ. ಅದಕ್ಕಾಗಿ ಯುನೈಟೆಡ್ ಆಸ್ಪತ್ರೆಯ ಸಿಬ್ಬಂದಿಗೂ ಮತ್ತು ಆಸ್ಪತ್ರೆಯ ನೇತೃತ್ವ ವಹಿಸಿರುವ ಡಾ. ವಿಕ್ರಮ್ ಸಿದ್ದಾರೆಡ್ಡಿಯವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಚೇತನ್ ಅವರು ಹೇಳಿದರು.
ಆರೋಗ್ಯದ ಬಗ್ಗೆ ಎಲ್ಲರೂ ಅಗತ್ಯ ಗಮನ ಕೊಡಬೇಕೆಂದು ಮನವಿ ಮಾಡಿದ ಚೇತನ್ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ಉಪೇಕ್ಷೆ ಮಾಡದೇ ಕೂಡಲೇ ಆಸ್ಪತ್ರೆಗೆ ಧಾವಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ಎದೆ ನೋವು ಕಾಣಿಸಿಕೊಂಡರೆ ಅದು ಗ್ಯಾಸ್ ಇರಬಹುದು ಅಥವಾ ಇನ್ನೇನೋ ಸಣ್ಣಪುಟ್ಟ ಸಮಸ್ಯೆ ಇರಬಹುದು ಎಂದು ಕೆಲವರು ಅಸಡ್ಡೆ ತೋರುತ್ತಾರೆ. ಎಂದೂ ಹಾಗೆ ಮಾಡಬೇಡಿ. ಅದು ಹೃದಯಾಘಾತದ ಮುನ್ಸೂಚನೆ ಆಗಿರಬಹುದು. ಹಾಗಾಗಿ, ಹೃದಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೂ ಕೂಡಲೇ ಆಸ್ಪತ್ರೆಗೆ ಧಾವಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಸಡ್ಡೆಯಿಂದ ಅಮೂಲ್ಯ ಜೀವಕ್ಕೆ ಕುತ್ತು ಬಾರದಂತೆ ಎಚ್ಚರಿಕೆ ವಹಿಸಬೇಕು,” ಎಂದು ಅವರು ಕರೆ ನೀಡಿದರು.
ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿಯವರು ಮಾತನಾಡಿ ಹನ್ನೆರಡು ವರ್ಷಗಳ ಹಿಂದೆ 2012ರ ಫೆಬ್ರುವರಿ 19ರಂದು ಕೇವಲ 24 ಹಾಸಿಗೆಯ ಒಂದು ಸಣ್ಣ ಆಸ್ಪತ್ರೆಯಾಗಿ ಪ್ರಾರಂಭವಾದ ಯುನೈಟೆಡ್ ಆಸ್ಪತ್ರೆ ಈಗ 150 ಹಾಸಿಗೆ ದೊಡ್ಡ ಆಸ್ಪತ್ರೆಯಾಗಿ ಮಾತ್ರವಲ್ಲ ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ದರ್ಜೆಯ ಉಪಕರಣಗಳು ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕಲ್ಯಾಣ ಕರ್ನಾಟಕದ ಅಚ್ಚುಮೆಚ್ಚಿನ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದರು.
“ಹಿಂದಿನ ವಾರ್ಷಿಕೋತ್ಸವದ ಸಂದರ್ಭಗಳಲ್ಲೆಲ್ಲಾ ನಾವು ದೊಡ್ಡ ಪ್ರಮಾಣದ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದೆವು. ಆದರೆ ಈ ಬಾರಿ ವಿಶೇಷವಾಗಿ ಉಚಿತ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಏಕೆಂದರೆ, ಈಗ್ಗೆ ಆರು ತಿಂಗಳ ಹಿಂದೆಯಷ್ಟೇ ನಾವು ಆಸ್ಪತ್ರೆಯಲ್ಲಿ ಅತ್ಯುತ್ತಮವಾದ ಕ್ಯಾಥ್ ಲ್ಯಾಬ್ ಪ್ರಾರಂಭಿಸಿದ್ದೇವೆ. ಇದರು ಪ್ರಯೋಜನ ಜನಸಾಮಾನ್ಯರಿಗೆ ಉಚಿತವಾಗಿ ಸಿಗಲಿ ಎಂಬ ಉದ್ದೇಶದಿಂದ ಈ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ಮಾತ್ರವಲ್ಲದೇ ವೈದ್ಯರು ಸೂಚಿಸಿದರೆ ಆಂಜಿಯೋಗ್ರಾಂ ರೀತಿಯ ಕ್ಯಾಥ್ ಲ್ಯಾಬ್ ಪ್ರಕ್ರಿಯೆಯನ್ನೂ ಕೂಡ ಉಚಿತವಾಗಿ ಮಾಡುತ್ತೇವೆ,” ಎಂದರು.

ಯುನೈಟೆಡ್ ಆಸ್ಪತ್ರೆಯಲ್ಲಿ ಸ್ಥಾಪನೆಯಾದ ಕ್ಯಾಥ್ ಲ್ಯಾಬ್ ಬಗ್ಗೆ ಇದಕ್ಕೂ ಮೊದಲು ಮಾತಾಡಿದ ಮ್ಯಾಕ್ಸಿಲೋಫೆಶಿಯಲ್ ಸರ್ಜನ್ ಡಾ. ಉಡುಪಿ ಕೃಷ್ಣ ಜೋಶಿ ಅತ್ಯುತ್ತಮ ಗುಣಮಟ್ಟದ ಈ ಕ್ಯಾಥ್‍ ಲ್ಯಾಬಿನಲ್ಲಿ ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಎಂದರು. ಈ ಕ್ಯಾಥ್ ಲ್ಯಾಬ್ ಸ್ಥಾಪನೆಯೊಂದಿಗೆ ಇಸಿಜಿ, ಇಕೋ, ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಬೈಪಾಸ್ ಸರ್ಜರಿ, ಫೆರಿಫೆರಲ್ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಹಾಕುವುದು ಮುಂತಾದ ಹೃದಯ ಸಂಬಂಧಿ ಸೌಲಭ್ಯಗಳು ಈಗ ಯುನೈಟೆಡ್ ಆಸ್ಪತ್ರೆಯಲ್ಲಿಯೇ ಸಿಗುತ್ತವೆ ಎಂದು ಅವರು ಹೇಳಿದರು.

ಸಂಜೆಯ ವೇಳೆಗೆ ಈ ಉಚಿತ ಶಿಬಿರದಲ್ಲಿ ಸುಮಾರು 870 ಜನರನ್ನು ಪರೀಕ್ಷಿಸಲಾಗಿದ್ದು ಎಲ್ಲರಿಗೂ ರಕ್ತಪರೀಕ್ಷೆ ಮತ್ತು ಇಸಿಜಿಗಳನ್ನು ಮಾಡಲಾಯಿತು. ಅವರಲ್ಲಿ 90 ರೋಗಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಇಕೋ ಸ್ಕ್ಯಾನಿಂಗ್ ಮಾಡಲಾಗಿದ್ದು ಅವರಲ್ಲಿ ಸುಮಾರು 30 ರೋಗಿಗಳಿಗೆ ಕೊರೋನರಿ ಆಂಜಿಯೋಗ್ರಾಂ ಪ್ರಕ್ರಿಯೆಗೆ ಒಳಗಾಗಲು ಸಲಹೆ ನೀಡಲಾಯಿತು. 550ಕ್ಕೂ ಹೆಚ್ಚು ರೋಗಿಗಳು ಕ್ರಾಸ್ ಕನ್ಸಲ್ಟೇಶನ್ ಕೂಡ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಡಾ. ಸಿದ್ದಾರೆಡ್ಡಿಯವರು ಶಿಬಿರದಲ್ಲಿ ಎಲ್ಲಾ ಪರೀಕ್ಷೆಗಳನ್ನು, ಸ್ಕ್ಯಾನಿಂಗುಗಳನ್ನು ಉಚಿತವಾಗಿ ಮಾಡಲಾಗಿದ್ದು ಅಗತ್ಯ ಇದ್ದವರಿಗೆ ಔಷಧಿಗಳನ್ನೂ ವಿತರಿಸಲಾಗಿದೆ ಎಂದರಲ್ಲದೇ ಕೋರೋನರಿ ಆಂಜಿಯೋಗ್ರಾಂ ಪ್ರಕ್ರಿಯೆಗೆ ಒಳಗಾಗಲು ಸೂಚಿಸಿದ ಎಲ್ಲಾ 30 ಜನರಿಗೆ ಆ ಪ್ರಕ್ರಿಯೆಯನ್ನು ಮುಂದಿನ ಒಂದೆರಡು ದಿನಗಳಲ್ಲಿ ಉಚಿತವಾಗಿ ಮಾಡಿ ಮುಗಿಸಲಾಗುವುದು ಎಂದರು.

ಯುನೈಟೆಡ್ ಆಸ್ಪತ್ರೆಯ ನಿರ್ದೇಶಕರು ಮತ್ತು ಹಿರಿಯ ನೇತ್ರಜ್ಞೆ ಡಾ. ವೀಣಾ ಸಿದ್ದಾರೆಡ್ಡಿ, ಹಿರಿಯ ಹೃದಯ ತಜ್ಞರಾದ ಡಾ. ಬಸವಪ್ರಭು ಅಮರಖೇಡ್ ಮತ್ತು ಡಾ. ಅರುಣ್ ಕುಮಾರ್ ಹರಿದಾಸ್, ಮೂಳೆ ತಜ್ಞರಾದ ಡಾ. ರಾಜು ಕುಲ್ಕರ್ಣಿ ಮತ್ತು ಡಾ. ನಿಶಾಂತ್ ಜಾಜಿ, ಇಂಟೆನ್ಸಿವಿಸ್ಟ್ ಡಾ. ಸುದರ್ಶನ ಲಾಖೆ ಮತ್ತು ಡಾ. ಶೇಖ್ ಅಹ್ಮದ್, ಜನರಲ್ ಸರ್ಜನ್ ಡಾ. ಮೊಹ್ಮದ್ ಅಬ್ದುಲ್ ಬಶೀರ್, ನರರೋಗ ತಜ್ಞರಾದ ಡಾ. ವಿನಯ ಸಾಗರ್ ಶರ್ಮ, ಪ್ಲಾಸ್ಟಿಕ್ ಸರ್ಜನ್ನರುಗಳಾದ ಡಾ. ಪವನ್ ಪಾಟೀಲ್ ಮತ್ತು ಡಾ. ಅನಿಲ್ ಕುಮಾರ್ ಮಲ್ಹಾರಿ, ಮಕ್ಕಳ ತಜ್ಞರಾದ ಡಾ. ಪ್ರಶಾಂತ್ ಕುಲ್ಕರ್ಣಿ, ಸ್ತ್ರೀರೋಗ ತಜ್ಞರಾದ ಡಾ. ಶ್ವೇತಾ ಆಳಂದ, ಫಿಜಿಶಿಯನ್ನರಾದ ಡಾ. ದಯಾನಂದ ರೆಡ್ಡಿ ಮತ್ತು ಡಾ. ಶಿವರಾಜ್ ಹಂಚಿನಾಳ, ರೇಡಿಯಾಲಿಸ್ಟ್ ಡಾ. ರಾಮಾಚಾರಿ, ಫಿಜಿಯೋಥೆರೆಪಿಸ್ಟ್ ಡಾ. ಅಬ್ದುಲ್ ಹಕೀಮ್, ಸೀನಿಯರ್ ಅಡ್ಮಿನ್ ದಾವುದ್ ಅಲಿ ಮತ್ತು ಡಾ. ಜಿತೇಂದ್ರ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಗೀತಾ, ಮಾರುಕಟ್ಟೆ ವಿಭಾಗದ ಮ್ಯಾನೇಜರ್ ರಾಚಣ್ಣ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.