ಉಚಿತ ವೈದ್ಯಕೀಯ ಶಿಬಿರ

ರಾಯಚೂರು,ಜ.೦೯- ತಾಲೂಕಿನ ಮಮದಾಪುರ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ೧೨೫ನೇ ಜನ್ಮ ವಾರ್ಷಿಕ ಅಂಗವಾಗಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಸಲಾಯಿತು.
ರಾಯಚೂರು ನಗರದ ಪ್ರಮುಖ ವೈದ್ಯರಾದ ಬಾಲಂಕು ಆಸ್ಪತ್ರೆಯ ಡಾ. ಶ್ರೀನಿವಾಸ್ ಸೋಮ ಮತ್ತು ಬೆಟ್ಟದೂರು ಆಸ್ಪತ್ರೆಯ ಡಾ. ಜಯಂತ್ ಎಸ್. ಅವರು ನೇತಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವೈದ್ಯರಾದ ಶ್ರೀನಿವಾಸ್ ಸೋಮ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಪಾತ್ರ ಬಹಳ ಪ್ರಮುಖವಾಗಿದೆ. ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ನೇತಾಜಿಯವರ ಕುರಿತು ಗೊತ್ತಿಲ್ಲ.
ಅವರ ಜನ್ಮ ವಾರ್ಷಿಕ ಅಂಗವಾಗಿ ಎಐಡಿವೈಒ ಸಂಘಟನಕಾರರು ಹಮ್ಮಿಕೊಂಡಿರುವ ಈ ಉಚಿತ ವೈದ್ಯಕೀಯ ಶಿಬಿರ ಭಾಗಿಯಾಗಲು ಬಹಳ ಸಂತೋಷವಾಗಿದೆ ಎಂದರು. ನಂತರ ಸ್ತ್ರೀರೋಗ ತಜ್ಞರಾದ ಡಾ.ಜಯಂತ್ ಎಸ್ ಅವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಅವರು ಕಟ್ಟಿದ ಐಎನ್‌ಎ ಸೈನ್ಯ ಬಹಳ ಪ್ರಮುಖ ಪಾತ್ರ ವಹಿಸಿದೆ. ನೇತಾಜಿ ಅವರ ಹೋರಾಟದ ಜೀವನ ಇಂದಿನ ಯುವಜನರಿಗೆ ಆದರ್ಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಎಐಡಿವೈಒ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಅವರು ಮಾತನಾಡಿ, ಇಂದು ದೇಶಾದ್ಯಂತ ಯುವಜನರು ಸಾಂಸ್ಕೃತಿಕ ಅಧಃಪತಕ್ಕೆ ಬಲಿಯಾಗುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕೊಂಡಿಯನ್ನು ಕಳಚಿಕೊಂಡು ಬೇರಿಲ್ಲದವರಾಗಿದ್ದಾರೆ. ಹಾಗಾಗಿ ನಮ್ಮ ಸಂಘಟನೆ ನೇತಾಜಿ ಸುಭಾಷ್ ಚಂದ್ರ ಬೋಸ್ ಹೋರಾಟ ವಿಚಾರಗಳನ್ನು ಎತ್ತಿ ಹಿಡಿಯುತ್ತಾ ಅಂತಹ ಪರಂಪರೆ ಮುಂದುವರಿಸುತ್ತಿದೆ ಎಂದರು. ಇಂದಿನ ನಿರುದ್ಯೋಗ ಸೇರಿದಂತೆ ಹಲವು ಜನ ಸಮಸ್ಯೆಗಳ ವಿರುದ್ಧ ಹೋರಾಡಲು ಸ್ಪೂರ್ತಿಯಾಗಿವೆ ಎಂದರು.
ಡಾ.ಶ್ರೀನಿವಾಸ್ ಸೋಮ, ಡಾ. ಜಯಂತ್ ಎಸ್ ಹಾಗೂ ನೇತ್ರ ತಜ್ಞರಾದ ಎಂ.ಎ.ಎಚ್.ನದೀಮ್ ಅವರು ಮಮದಾಪುರ ಗ್ರಾಮದ ಹಿರಿಯ ನಾಗರಿಕರು, ಹೆಣ್ಣುಮಕ್ಕಳು ಸೇರಿ ನೂರಾರು ಜನರನ್ನು ತಪಾಸಣೆ ಮಾಡಿ ಸಲಹೆಗಳನ್ನು, ಔಷದ ನೀಡಿದರು. ಮೊದಲಿಗೆ ಪ್ರಾಸ್ತವಿಕವಾಗಿ ಮಾತನಾಡಿದ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ಅವರು ನಿರೂಪಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್ ನಾಯಕ್, ಗ್ರಾಮದ ಯುವಕರಾದ ಮಂದಕಲ್, ಸುಗ್ರೀವ, ಸವಾರೆಪ್ಪ, ಆಂಜನೇಯ ಯಾದವ್, ತಾಯಪ್ಪ, ಉದಯ್ ಕಿರಣ್, ಮಹೇಂದ್ರ ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯರಾದ ಯಲ್ಲಪ್ಪ ದೊರೆ, ಮೌನೇಶ್ ಮೀರಾಪುರ, ಅಭಿಲಾಷ್ ಅಲಬನೂರು, ಜಾಫರ್, ಪ್ರವೀಣ್, ಮರಿಲಿಂಗ, ಸ್ವಾಮಿ, ಮೌನೇಶ ಮುಂತಾದವರು ಭಾಗವಹಿಸಿದ್ದರು. ನೂರಾರು ಜನ ಗ್ರಾಮದ ವೃದ್ಧರು, ಹೆಣ್ಣು ಮಕ್ಕಳು, ಯುವಕರು ಶಿಬಿರ ಸದುಪಯೋಗಪಡಿಸಿಕೊಂಡರು. ಆಶಾ ಕಾರ್ಯಕರ್ತೆ ಯಲ್ಲಮ್ಮ ಅವರು ಇದ್ದರು.