ಉಚಿತ ವಿದ್ಯುತ್ ಲಾಭ ಪಡೆಯಲು ಜೆಸ್ಕಾಂ ಮನವಿ:ಮನೆ ಬಾಗಿಲಿಗೆ ಬಂತು ಗೃಹಜ್ಯೋತಿ ನೊಂದಣಿ

ವಾಡಿ:ಜು.22: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಬಡವರ ಮನೆ ಬೆಳಗಲಿದ್ದು, ಗ್ರಾಹಕರಿಗೆ ಉಚಿತ ವಿದ್ಯುತ್ ಲಾಭ ಒದಗಿಸಲು ಜೆಸ್ಕಾಂ ಸಿಬ್ಬಂದಿ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಾಗೃತಿ ಜಾಥಾ ನಡೆಸುವ ಗೃಹಜ್ಯೋತಿ ನೊಂದಣಿಗೆ ಮನವಿ ಮಾಡುತ್ತಿದ್ದಾರೆ. ಜೆಸ್ಕಾಂ ಸಿಬ್ಬಂದಿಗಳು ಮನೆ ಬಾಗಿಲಿಗೆ ಹೋಗಿ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ.

ಶುಕ್ರವಾರ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಜೆಸ್ಕಾಂ ಸಿಬ್ಬಂದಿಗಳ ನೇತೃತ್ವದ ಗೃಹಜ್ಯೋತಿ ಜಾಗೃತಿ ಜಾಥಾ, ನೊಂದಣಿ ಮಾಡಿಕೊಳ್ಳದ ಜನರಲ್ಲಿ ಅರಿವು ಮೂಡಿಸಿತು. ವಾಹನವೊಂದಕ್ಕೆ ಧ್ವನಿವರ್ಧಕ ಅಳವಡಿಸಿ ಬ್ಯಾನರ್ ಅಂಟಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಉಚಿತ ವಿದ್ಯುತ್ ಪಡೆಯಬಯಸುವ ಫಲಾನುಭವಿಗಳು ತಕ್ಷಣವೇ ವಿದ್ಯುತ್ ಮೀಟರ್ ಸಂಖ್ಯೆಗಳ ನೊಂದಣಿ ಮಾಡಿಸಿಕೊಳ್ಳಬೇಕು ಎಂದು ಕೋರಿದರು.

ಈ ವೇಳೆ ಕಮರವಾಡಿ ಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಜೆಸ್ಕಾಂ ಇಲಾಖೆಯ ವಾಡಿ ವಲಯ ಗ್ರಾಮೀಣ ಪ್ರಭಾರಿ ಶಾಖಾಧಿಕಾರಿ ನಾಗೇಶ ವಿ.ಕುಂಬಾರ, ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ನೀಡಲು ಬಯಸಿ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದೆ. ಈಗಾಗಲೇ ಅನೇಕರು ನೊಂದಣಿ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಬಹುತೇಕ ಜನರು ಹಿಂದೇಟು ಹಾಕುತ್ತಿದ್ದಾರೆ. ಮೀಟರ್ ಸಂಖ್ಯೆ ನೊಂದಣಿ ಮಾಡಿಕೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ನೊಂದಣಿ ಸಮಸ್ಯೆ ಇರಬಹುದು ಎಂದು ಗೊತ್ತಾಗಿದೆ. ಪರಿಣಾಮ ಜೆಸ್ಕಾಂ ಸಿಬ್ಬಂದಿಗಳು ಮನೆ ಮನೆಗೆ ಬಂದು ನೊಂದಣಿ ಮಾಡುತ್ತಿದ್ದಾರೆ. ಜಾಗೃತಿ ಜಾಥಾ ಪರಿಣಾಮ ಶುಕ್ರವಾರ ಒಂದೇ ದಿನ ನೂರು ಅರ್ಜಿ ನೊಂದಣಿಯಾಗಿವೆ. ಉಳಿದ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು. ಇದೇ ಜು.27 ಗೃಹಜ್ಯೋತಿ ನೊಂದಣಿಗೆ ಕೊನೆಯ ದಿನವಾಗಿದ್ದು, ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು.

ಜೆಸ್ಕಾಂ ಲೈನ್‍ಮೆನ್ ರವಿ ಜಾಧವ, ಬಸವಂತರಾಯ, ಮುಕುಂದ, ಮರೆಣ್ಣ ಜಾಥಾದಲ್ಲಿ ಪಾಲ್ಗೊಂಡಿದ್ದರು.