ಉಚಿತ ವಿದ್ಯುತ್ ಆದೇಶ ವಾಪಸ್ಸು
ದಲಿತರ ಮೇಲಿನ ಪ್ರೀತಿ ಎಲ್ಲೋಯ್ತು: ಕಾಂಗ್ರೆಸ್ ಟೀಕೆ


(ಸಂಜೆವಾಣಿ ವಾರ್ತೆ) 
ಬಳ್ಳಾರಿ:ಸೆ.5- ರಾಜ್ಯದ ಎಸ್‌ಸಿ, ಎಸ್‌ಟಿ ಜನಾಂಗದ ಬಡ ಕುಟುಂಬಗಳಿಗೆ  ತಿಂಗಳಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ  ಪ್ರಚಾರ ಮಾಡಿದ್ದ ಬಿಜೆಪಿ ಸರ್ಕಾರ ಇದೀಗ ಆ ಆದೇಶ ಹಿಂಪಡೆದಿದೆ. ಆ ಮೂಲಕ ಮತ್ತೊಮ್ಮೆ ತುಘಲಕ್ ದರ್ಬಾರ್ ತೋರಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಸ ಹೇಳಿಕೆ ನೀಡಿರುವ ಅವರು. ದೆಹಲಿಯ ಆಪ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಮಾದರಿಯಲ್ಲಿ,   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಎಸ್‌ಸಿ, ಎಸ್‌ಟಿ ಜನಾಂಗದ ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಗಿಫ್ಟ್ ಒಂದನ್ನು ಕೊಟ್ಟಂತೆ ಜಾಹಿರಾತು ನೀಡಿತು. ಜೊತೆಗೆ ಜನಾಂಗದ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಎಂದು ಪದೇ ಪದೇ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಿತು.
ಇನ್ನು ಬಿಜೆಪಿಯ ಪಟಾಲಂ, ನೋಡಿ ನಮ್ಮನ್ನು ದಲಿತ ವಿರೋಧಿ ಎನ್ನುವ ಕಾಂಗ್ರೆಸ್‌ ಗೆ ಎಸ್‌ಸಿ,ಎಸ್‌ಟಿ ಗಳಿಗೆ ಫ್ರೀ ಕರೆಂಟ್ ಕೊಡ್ತೇವೆ ಎಂದು ಪ್ರಚಾರ ಮಾಡಿದರು.
ಬಿಪಿಎಲ್ ಕಾರ್ಡ್ದಾರರು 50 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವುದೇ ಅನುಮಾನ. ಇದನ್ನೇ ಅರಿತು ಬಿಜೆಪಿಗರು ರಾಜ್ಯದ 1.39 ಕೋಟಿ ಕುಟುಂಬಗಳಿಗೆ ಈ ಯೋಜನೆ ನೀಡುವ ಗುರಿ ಮುಂದಿಟ್ಟರು. ಅದಾಗಲೇ ಕಾಂಗ್ರೆಸ್ ಸರ್ಕಾರ ಎಸ್‌ಸಿ,ಎಸ್‌ಟಿ ಮಾತ್ರವಲ್ಲದೆ ಎಲ್ಲಾ ಜನಾಂಗದ ಕೆಲ ಅರ್ಹ ಫಲಾನುಭವಿಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿದಂತೆ ಇತರೆ ಜ್ಯೋತಿ ಯೋಜನೆ ಅಡಿ 40 ಯುನಿಟ್ ಉಚಿತ ವಿದ್ಯುತ್ ನೀಡಿದ್ದವು. ಇದನ್ನು 75 ಯುನಿಟ್ ಗೆ ಏರಿಸುವ ಇಂಗಿತವನ್ನು ಬಿಜೆಪಿ ಸರ್ಕಾರ ವ್ಯಕ್ತಪಡಿಸಿತ್ತು. ಇದೀಗ ಇದನ್ನೂ ಸಹ ಹಿಂದೆ ಪಡೆದಿದೆ.  ಉಚಿತ ಆಸೆ ಹಚ್ಚಿ,  ಬಾಕಿ  ಕಟ್ಟಿಸಿಕೊಂಡ ಸರ್ಕಾರ ಥೇಟ್ ಅದಾನಿ, ಅಂಬಾನಿನ ಕಾರ್ಪೋರೇಟ್ ಕಂಪನಿ ರೀತಿ ಘೋಷಿಸಿದ ಸವಲತ್ತು ಮಾತ್ರವಲ್ಲ ಇದ್ದ ಸವಲತ್ತನ್ನೂ ಸಹ ಕಿತ್ತುಕೊಂಡಿದೆ. ಇಂತಹ ಜನವಿರೋಧಿ ನೀತಿಯ ಸರ್ಕಾರ ಖಂಡಿತಾ ಜನಪರ ಆಲೋಚನೆ ಮಾಡುವುದಿಲ್ಲ ಬದಲಿಗೆ ಆಡಳಿತವನ್ನು ವ್ಯವಹಾರದ ದೃಷ್ಟಿಯಲ್ಲೂ  ಜನರನ್ನು ಸಹ  ಗ್ರಾಹಕರಂತೆ  ನೋಡುತ್ತದೆ ಎಂಬುದನ್ನು ರುಜುವಾತು ಮಾಡಿದೆಂದಿದ್ದಾರೆ.

Attachments area