ಉಚಿತ ಲಸಿಕೆ ಸಂಪುಟ ಸಭೆಯಲ್ಲಿ ನಿರ್ಧಾರ


ಬೆಂಗಳೂರು, ಏ. ೨೪- ಮೇ ೧ ರಿಂದ ದೇಶಾದ್ಯಂತ ೧೮ ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕುವ ಅಭಿಯಾನ ಆರಂಭವಾಗುತ್ತಿದ್ದು, ೧೮ ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಕೊರೊನಾ ಲಸಿಕೆ ಹಾಕುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ೧೮ ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ಹಾಕುವ ತೀರ್ಮಾನಗಳು ಆಗಿವೆ. ರಾಜ್ಯದಲ್ಲೂ ೧೮ ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ಹಾಕಬೇಕು ಎಂಬ ಒತ್ತಡಗಳು ಹೆಚ್ಚಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರ್ಕಾರ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಿದೆ.
ಪ್ರಸ್ತುತ ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ೨೫೦ ರೂ. ದರ ನಿಗದಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಹಾಕಬೇಕು ಎಂಬ ಒತ್ತಡಗಳು ಸರ್ಕಾರದ ಮೇಲಿದ್ದು, ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೋ ಎಂಬುದು ಕುತೂಹಲ ಮೂಡಿಸಿದೆ.
ಪ್ರಸ್ತುತ ಕೇಂದ್ರ ಸರ್ಕಾರವೇ ಲಸಿಕಾ ವೆಚ್ಚವನ್ನು ಭರಿಸುತ್ತಿದೆ. ಆದರೆ ೧೮ ವರ್ಷ ಮೇಲ್ಪಟ್ಟವರ ಲಸಿಕಾ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು ಎಂಬ ನಿಲುವನ್ನು ಕೇಂದ್ರ ಹೊಂದಿದೆ. ದೇಶದಲ್ಲಿ ಜಾರ್ಖಾಂಡ್, ಗೋವಾ, ಛತ್ತೀಸ್‌ಘಡ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಬಿಹಾರ ಹಾಗೂ ಸಿಕ್ಕಿಂ ಸರ್ಕಾರಗಳು ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಾಗಿ ಹೇಳಿವೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೂ ಬಿಜೆಪಿ ಪಕ್ಷದಿಂದಲೇ ಉಚಿತ ಲಸಿಕೆ ನೀಡುವ ಒತ್ತಡ ಇದೆ. ಹಾಗಾಗಿ ಕನಿಷ್ಠ ಪಕ್ಷ ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಉಚಿತ ಲಸಿಕೆ ನೀಡುವಂತೆ ಬಿಜೆಪಿ ನಾಯಕರುಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ.
ರಾಜ್ಯದಲ್ಲಿ ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಒಂದು ಕೋಟಿ ಕೊರೊನಾಔಷಧಿ ಖರೀದಿಗೆ ೪೦೦ ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಬಿಡುಗಡೆ ಮಾಡಿದ್ದಾರೆ. ೧೮ ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡಿದರೆ ೨ ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆಯೇ ಅಥವಾ ಕಡು ಬಡವರಿಗೆ ಮಾತ್ರ ಲಸಿಕೆ ನೀಡಿ, ಉಳಿದವರಿಗೆ ಲಸಿಕೆ ನೀಡಲು ದರ ನಿಗದಿ ಮಾಡಬೇಕೇ ಎಂಬ ಬಗ್ಗೆ ಸೋಮವಾರದ ಸಂಪುಟ ಸಭೆಯಲ್ಲಿ ತೀರ್ಮಾನಗಳು ಆಗಲಿವೆ.