ಉಚಿತ ಲಸಿಕೆಗೆ ಕೋರ್ಟ್ – ಕಾಂಗ್ರೆಸ್ ಕಾರಣ

ಬೆಂಗಳೂರು,ಜೂ.೮- ಕಾಂಗ್ರೆಸ್ ಪಕ್ಷ ಮತ್ತು ಸುಪ್ರೀಂಕೋರ್ಟ್‌ನ ಹೋರಾಟದ ಫಲವಾಗಿ ದೇಶದ ಎಲ್ಲರಿಗೂ ಉಚಿತ ಲಸಿಕೆ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಬಸನಗೌಡ ತುರವಿಹಾಳ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಿತ್ತು. ಹಾಗೆಯೇ ಸುಪ್ರೀಂಕೋರ್ಟ್ ಸಹ ಲಸಿಕೆಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಿತ್ತು. ಇದರ ಫಲವಾಗಿ ಎಲ್ಲರಿಗೂ ಉಚಿತ ಲಸಿಕೆ ಸಿಕ್ಕಿದೆ. ಸುಪ್ರೀಂಕೋರ್ಟ್‌ಗೆ ಎಲ್ಲರ ಪರವಾಗಿ ತಲೆಬಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಆಡಳಿತ ವ್ಯವಸ್ಥೆ ಉಳಿಸಲು ಜನರ ನೋವು ಅಳಿಸಿ ಜೀವ ರಕ್ಷಿಸಲು ಸುಪ್ರೀಂಕೋರ್ಟ್ ನೆತೆದುಕೊಂಡ ನಿರ್ಣಯ ಮಹತ್ವದ್ದು, ಎಂದು ಅವರು ಆಕ್ಸಿಜನ್ ಹಂಚಿಕೆಯಿಂದ ಹಿಡಿದು ಲಸಿಕೆ ಹಾಕುವವರೆಗೂ ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಪ್ರತಿಯೊಂದು ವಿಷಯದಲ್ಲೂ ನ್ಯಾಯಾಲಯ ಸರ್ಕಾರಕ್ಕೆ ಆದೇಶ, ಸೂಚನೆ ಕೊಡಬೇಕಾಗಿ ಬಂದಿದ್ದು ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಅವರು ವ್ಯಂಗ್ಯವಾಡಿದರು.
ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಮಸ್ಕಿಯಲ್ಲಿ ಗೆಲುವು ಸಾಧ್ಯವಾಯಿತು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ರಾಹುಲ್‌ಗಾಂಧಿ ಅವರ ಸೂಚನೆಯಂತೆ ಎಲ್ಲರ ಜತೆಗೂಡಿ ಕೆಲಸ ಮಾಡಿರುವುದು ಚುನಾವಣೆ ಯಶಸ್ಸಿಗೆ ಕಾರಣ ಎಂದು ಅವರು ವಿಶ್ಲೇಷಿಸಿದರು.