ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರಕ್ಕೆ ಚಾಲನೆ


ಕೊಟ್ಟೂರು:  ಪಟ್ಟಣದ  ತುಂಗಭದ್ರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ  ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರಕ್ಕೆ  ಗಿಡಕ್ಕೆ ನೀರನ್ನು ಹಾಕುವ ಮೂಲಕ ಶ್ರೀ ವೀರೇಶ ಗುರೂಜಿಗಳು ಉದ್ಘಾಟಿಸಿದರು.
ಈ ಶಿಬಿರವನ್ನು ಬಸವ ಪತಂಜಲಿ ಯೋಗ ಸಮಿತಿ ಕರ್ನಾಟಕ, ಜೆಸಿಐ ಕೊಟ್ಟೂರು ಕಾಟನ್, ಥಿಯೋಸಾಫಿಕಲ್  ಲಾಡ್ಜ್, ಪಟ್ಟಣದ ವಿವಿಧ ಕೇಂದ್ರಗಳ ಯೋಗ ಪರಿವಾರ ಹಾಗೂ ಹಸಿರು ಹೊನಲು  ಸೇವಾ ಸಂಸ್ಥೆ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ಗುರು ಶ್ರೀ ವೀರೇಶ್ ಗುರೂಜಿ, ಬಸವ ಪತಂಜಲಿ ಯೋಗ  ನಿಸರ್ಗ ಚಿಕಿತ್ಸಾ  ಕೇಂದ್ರ ಕಪ್ಪತಗುಡ್ಡ ಕಡಕೋಳ ಇವರಿಂದ 14 ದಿವಸಗಳವರೆಗೆ  ಹಮ್ಮಿಕೊಳ್ಳಲಾಗಿದ್ದು, ಈ ಶಿಬಿರವನ್ನು ಕುರಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಆಯುಷ್ ಇಲಾಖೆಯ ಡಾ. ವಿಜಯಕುಮಾರ್  ಯೋಗ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆಯ ಬಗ್ಗೆ ತಿಳಿಸಿದರು.
  ಇಂಜಿನಿಯರ್ ಶಾಂತಕುಮಾರ್ ಮಾತನಾಡಿ ಇಂದಿನಿಂದ ಆರಂಭವಾಗಿರುವ ಈ ಶಿಬಿರ ಯಶಸ್ವಿಗೊಳಿಸಲು ಶಿಬಿರಾರ್ಥಿಗಳಾಗಿ ಆಗಮಿಸುವುದರೊಂದಿಗೆ ತಮ್ಮೊಂದಿಗೆ ನಾಳೆಯಿಂದ ಕನಿಷ್ಠ ಐದು ಜನರನ್ನು ಕರೆತರುವಂತಹ ಸಂಕಲ್ಪದೊಂದಿಗೆ ಈ ಶಿಬಿರದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಕರೆ ನೀಡಿದರು.
   ಈ ಸಂದರ್ಭದಲ್ಲಿ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಬಿಎಡ್ ಕಾಲೇಜಿನ ಉಪನ್ಯಾಸಕರಾದ ಅರವಿಂದ್ ಬಸಾಪುರ, ಜೆಸಿಐ ಕೊಟ್ಟೂರು ಕಾಟನ್ ಅಧ್ಯಕ್ಷರಾದ  ಯೋಗೇಶ್ ಅಂಗಡಿ, ಯೋಗ ಶಿಕ್ಷಕರಾದ ದೇವರಮನೆ ಕರಿಯಪ್ಪ, ಎನ್ ಜಗದೀಶ್,  ಕರ್ಣಂ  ಮಹಾಂತಪ್ಪ, ಹಸಿರು ಹೊನಲು ಸೇವಾ ಸಂಸ್ಥೆಯ ಚೇತನ್ ಕುಮಾರ್ ಮಾತನಾಡಿದರು. ಶಿಬಿರದ ನಂತರ ಶಿಬಿರಾರ್ಥಿಗಳಿಗೆ  ಹಾಗೂ ಇತರೆ 50 ಕ್ಕೂ ಹೆಚ್ಚು ಜನರಿಗೆ ನಿಸರ್ಗ ಚಿಕಿತ್ಸೆಯ ಮಾಹಿತಿಯನ್ನು ಶ್ರೀ ವೀರೇಶ್ ಗುರೂಜಿಯವರು  ತಿಳಿಸಿಕೊಟ್ಟರು. ಈ ಶಿಬಿರ ಕಾರ್ಯಕ್ರಮದ ನಿರೂಪಣೆಯನ್ನು ಯೋಗ ಶಿಕ್ಷಕರಾದ ಕೆ. ರಾಮಣ್ಣ ನಿರ್ವಹಿಸಿದರು.

One attachment • Scanned by Gmail