ಉಚಿತ ಯೋಗ ತರಬೇತಿ

ಚಿತ್ರದುರ್ಗ. ಮಾ.೨೭; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಯೋಗ ತರಬೇತಿ ಕೇಂದ್ರ ತೆರೆಯಲಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ನಾಗೇಂದ್ರಮ್ಮ ಉದ್ಘಾಟಿಸಿದರು ನಂತರ ಗ್ರಾಮದ ಬೀದಿಗಳಲ್ಲಿ ಯೋಗ ಗುರು ರವಿ,ಕೆ.ಅಂಬೇಕರ್ ನೇತೃತ್ವದಲ್ಲಿ ಯೋಗ ಪ್ರಚಾರ ಜಾಥ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ” ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.ರಕ್ತದ ಒತ್ತಡ, ತೂಕ ಕಡಿಮೆ ಮಾಡಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇಡುವಲ್ಲಿ ಯೋಗ ಸಕಾರಾತ್ಮಕವಾದ ಪರಿಣಾಮವನ್ನು ನೀಡುವುದರಿಂದ ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ ಪ್ರಯೋಗ ಇದಾಗಿದೆ. ತೂಕ ಕಳೆದುಕೊಳ್ಳಲು ಮಾತ್ರವಲ್ಲ ಯೋಗವು ದೇಹವನ್ನು ಸಮತೂಕದಲ್ಲಿಟ್ಟು ದೃಢ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ. ಇದರೊಂದಿಗೆ ಯೋಗ ಮನಸ್ಸಿನ ಶಾಂತಿಯನ್ನು ಕಾಪಾಡಲು ಅತ್ಯುತ್ತಮ ಮಾರ್ಗವಾಗಿದೆ ” ಎಂದು ತಿಳಿಸಿದರು. ಶಾಲೆಯ ಸಹ ಶಿಕ್ಷಕರಾದ ಹೆಚ್.ಕೃಷ್ಣಪ್ಪ,. ಮಂಜುನಾಥ್, ಚನ್ನಕೇಶವ, ಆಶಾ ಕಾರ್ಯಕರ್ತೆ ಶ್ರೀಮತಿ ಪಿ.ಮಹಾದೇವಿ, ಆರೋಗ್ಯ ಪ್ರಶಿಕ್ಷಣಾರ್ಥಿಗಳಾದ ರೋಹಿಣಿ, ಸಹನಾ, ಕವಿತ, ಪಲ್ಲವಿ, ಸಹಾನಾ,ಆರ್., ಅಂಗನವಾಡಿ ಸಹಾಯಕಿ ಮಾರಮ್ಮ ಹಾಗೂ ಶಾಲಾ ಮಕ್ಕಳು ಗ್ರಾಮಸ್ಥರು ಜಾಥದಲ್ಲಿ ಭಾಗವಹಿಸಿದ್ದರು.