ಉಚಿತ ಭರವಸೆ ಪಟ್ಟಿಗೆ ಐವಿಎಫ್

ಮತದಾರರ ಓಲೈಕೆಗೆ ಕೃತಕ ಗರ್ಭಧಾರಣೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಭರವಸೆ

ನವದೆಹಲಿ, ನ. ೨೬- ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಓಲೈಸಲು ಉಚಿತ ಯೋಜನೆಗಳನ್ನು ಜಾರಿ ಪಟ್ಟಿಗೆ ಈಗ ಕೃತಕ ಗರ್ಭಧಾರಣೆಯೂ ಸೇರ್ಪಡೆಯಾಗಿದೆ. ಗೋವಾದಲ್ಲಿ ಈಗಾಗಲೇ ಉಚಿತ ಗರ್ಭಧಾರಣೆ ಯೋಜನೆ ಜಾರಿಯಲ್ಲಿದ್ದು, ರಾಜಸ್ತಾನದಲ್ಲೂ ಕಾಂಗ್ರೆಸ್ ಈ ಉಚಿತ ಗರ್ಭಧಾರಣೆ ಜಾರಿ ಭರವಸೆಯನ್ನು ಮತದಾರರಿಗೆ ನೀಡಿದೆ.
ರಾಜಸ್ತಾನದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಉಚಿತ ಕೃತಕ ಗರ್ಭಧಾರಣೆಯ ಯೋಜನೆಯನ್ನು ಜಾರಿ ಮಾಡುವ ಭರವಸೆಯನ್ನು ನೀಡಿದೆ.
ಉಚಿತ ಗರ್ಭಧಾರಣೆ ಸಾಮಾನ್ಯರ ಕೈಗೆ ಎಟುಕುವುದಿಲ್ಲ. ಇದು ದುಬಾರಿ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಮಾನ್ಯರಿಗೂ ಉಚಿತ ಗರ್ಭಧಾರಣೆಯ ಐವಿಎಫ್ ಚಿಕಿತ್ಸೆಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ರಾಜಸ್ತಾನದಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಗೋವಾದಲ್ಲೂ ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು, ದೇಶದಲ್ಲೇ ಐವಿಎಫ್ ಉಚಿತ ಚಿಕಿತ್ಸೆಯನ್ನು ಜಾರಿ ಮಾಡಿದ ರಾಜ್ಯ ಗೋವಾ ಆಗಿದೆ.
ಮಹಾರಾಷ್ಟ್ರದಲ್ಲೂ ಐವಿಎಫ್ ಚಿಕಿತ್ಸೆಯನ್ನು ಬಡವರಿಗೆ ಉಚಿತವಾಗಿ ಒದಗಿಸುವ ಬಗ್ಗೆ ಅಲ್ಲಿನ ಬಿಜೆಪಿ ಸರ್ಕಾರ ಪರಿಶೀಲನೆ ನಡೆಸಿದೆ. ಇದೆಲ್ಲದರ ಮಧ್ಯೆ ರಾಜಸ್ತಾನದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತ ಐವಿಎಫ್ ಚಿಕಿತ್ಸೆಯನ್ನು ಸೇರ್ಪಡೆ ಮಾಡಿದೆ.
ರಾಜಕೀಯ ಪಕ್ಷಗಳ ಈ ನಡೆಯನ್ನು ಸಾರ್ವಜನಿಕ ಆರೋಗ್ಯ ವಲಯದ ತಜ್ಞರು ಸ್ವಾಗತಿಸಿದ್ದಾರೆ. ಬಂಜೆತನದಿಂದ ಬಳಲುತ್ತಿರುವವರಿಗೆ ಈ ಯೋಜನೆ ಒಂದು ರೀತಿ ಅನುಕೂಲವಾಗುತ್ತದೆ ಹಾಗಾಗಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಐವಿಎಫ್ ಚಿಕಿತ್ಸೆಯನ್ನು ಸೇರ್ಪಡೆ ಮಾಡಿರುವುದಕ್ಕೆ ಆರೋಗ್ಯ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಬಂಜೆತನದಿಂದ ಬಳಲುವ ದಂಪತಿಗಳು ಒಂದು ಐವಿಎಫ್ ಮೂಲಕ ಮಗುವನ್ನು ಪಡೆಯಲು ಸರಾಸರಿ ೨.೫ ಲಕ್ಷದಿಂದ ೪ ಲಕ್ಷ ರೂ.ಗಳವರೆಗೆ ವೆಚ್ಚ ಮಾಡಬೇಕು. ಈ ಚಿಕಿತ್ಸೆ ದುಬಾರಿಯಾಗಿರುವುದರಿಂದ ಬಡವರು ಐವಿಎಫ್ ಚಿಕಿತ್ಸೆಗೆ ಹೋಗಲು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದರ ಬಗ್ಗೆ ಗಮನ ಹರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಂಜೆತನ ಒಂದು ಕಾಯಿಲೆ ಎಂದು ವರ್ಗೀಕರಿಸಲಾಗುತ್ತಿದೆ. ಯಾವುದೇ ಇತರೆ ಕಾಯಿಲೆಗಳಂತೆ ಸಂತಾನಹೀನತೆ ಚಿಕಿತ್ಸೆ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಎಲ್ಲ ರೋಗಗಳಂತೆ ಇದನ್ನು ಉಚಿತ ವೈದ್ಯಕೀಯ ಚಿಕಿತ್ಸೆಗಳ ಪಟ್ಟಿಯಲ್ಲಿ ಸೇರಿಸುವುದು ಸೂಕ್ತ ಎಂದು ಗುರುಗ್ರಾಮದ ಬಿರ್ಲಾ ಫರ್ಟಿಲಿಟಿ ಸಂಸ್ಥೆಯ ಹಿರಿಯ ಸಲಹೆಗಾರ ರಂಜಿತ್ ಮಂಜಲ್ ಹೇಳಿದ್ದಾರೆ.
ಭಾರತದಲ್ಲಿ ಸಂತಾನೋತ್ಪತ್ತಿ ಸಮಸ್ಯೆಯು ಹೆಚ್ಚಾಗಿದೆ. ಆರು ದಂಪತಿಗಳಲ್ಲಿ ಒಬ್ಬರು ಐವಿಎಫ್ ಮೂಲಕ ಮಗುವನ್ನು ಪಡೆಯಲು ಇಚ್ಛಿಸುವ ಅಧ್ಯಯನ ವರದಿಗಳು ಇರುವಾಗ ರಾಜಕೀಯ ಪಕ್ಷಗಳು ಉಚಿತ ಐವಿಎಫ್ ಚಿಕಿತ್ಸೆಗೆ ಮುಂದಾಗಿರುವುದು ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವರದಾನವಾಗುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಗೋವಾದಲ್ಲಿ ಈ ಯೋಜನೆ ಯಶಸ್ವಿಯಾಗಿ ಜಾರಿ ಮಾಡುವ ಮೂಲಕ ಐವಿಎಫ್ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿರುವ ದೇಶದ ಮೊದಲ ರಾಜ್ಯ ಗೋವಾ ಆಗಿದೆ.
ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ರಾಜಸ್ತಾನದಲ್ಲೂ ಈ ಯೋಜನೆ ಜಾರಿಯಾಗಲಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಜಾರಿಯಾಗುವ ಸಾಧ್ಯತೆಗಳಿವೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಐವಿಎಫ್ ಚಿಕಿತ್ಸೆಯನ್ನು ಜಾರಿ ಮಾಡಬೇಕು ಎಂದು ಕೆಲ ಆರೋಗ್ಯ ತಜ್ಞರು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಯನ್ನೂ ಇಟ್ಟಿದ್ದಾರೆ.
ಬಂಜೆತನ ಸಮಸ್ಯೆಯಿಂದ ಮಗು ಪಡೆಯಲು ಸಾಧ್ಯವಾಗದ ಬಡ ದಂಪತಿಗಳಿಗೆ ಐವಿಎಫ್ ಚಿಕಿತ್ಸೆಯಿಂದ ಅವರೂ ಮಗುವನ್ನು ಪಡೆದು ಸುಖ ಸಂಸಾರ ನಡೆಸಲು ಸಾಧ್ಯವಾಗುತ್ತದೆ.