ಉಚಿತ ಬೀಜ, ರಸಗೊಬ್ಬರ ವಿತರಣೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಕಲಬುರಗಿ.ಜೂ.07: ಕೋವಿಡ್ ಸಂಕಷ್ಟದಲ್ಲಿರುವ ರೈತರೆಲ್ಲರಿಗೂ ಮುಂಗಾರು ಬಿತ್ತನೆಯ ಬೀಜಗಳನ್ನು ಉಚಿತವಾಗಿ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ವಿತರಿಸುವುದೂ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ಜಾತ್ಯಾತೀತ ಜನತಾದಳದ ನೇತೃತ್ವದಲ್ಲಿ ನಗರದ ಟೌನ್ ಹಾಲ್‍ನಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಎದುರುಗಡೆ ಸೋಮವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಳೆ ಚೆನ್ನಾಗಿ ಆಗಿರುವುದರಿಂದ ರೈತರ ಬಿತ್ತನೆಯ ಕಾರ್ಯವು ಸಹ ಆರಂಭವಾಗಿದ್ದು, ರೈತರಿಗೆ ಉಚಿತವಾಗಿ ಬೀಜ ಹಾಗೂ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಬಂದು ಜನಜೀವನ ಅಸ್ತವ್ಯಸ್ತಗೊಳಿಸಿದೆ. ಇಂತಹ ಸಂದರ್ಭದಲ್ಲಿ ಡೀಸೆಲ್, ಪೆಟ್ರೋಲ್, ಗ್ಯಾಸ್, ತರಕಾರಿ ಮುಂತಾದ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆಯನ್ನು ನಿಯಂತ್ರಿಸುವಲ್ಲಿ ಹಾಗೂ ಮಹಾಮಾರಿ ಕೊರೋನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್. ಸುರೇಶಕುಮಾರ್ ಅವರು ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ನ್ಯಾಯ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಇನ್ನೊಂದು ನ್ಯಾಯ ಮಾಡುತ್ತಿದ್ದಾರೆ. ಜೀವ ಎಲ್ಲರಿಗೂ ಒಂದೇ. ತಾರತಮ್ಯ ಮಾಡದೇ ಕೂಡಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನೂ ಸಹ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿಸಲು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಿದೆ ಎಂದು ಟೀಕಿಸಿದ ಅವರು, ಕೋವಿಡ್‍ದಿಂದ ಸಂಕಷ್ಟದಲ್ಲಿರುವ ಜನರಿಗಾಗಿ ವಿದ್ಯುತ್ ಬಿಲ್, ನೀರಿನ ಬಿಲ್ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಬ್ಯಾಂಕ್ ಮುಖಾಂತರ ಪಡೆದ ಸಾಲವನ್ನು ಕಂತುಗಳನ್ನು ಕಟ್ಟುವ ಅವಧಿಯನ್ನು ಮುಂದೂಡುವಂತೆ ಹಾಗೂ ಬಡ್ಡಿ ಮನ್ನಾ ಮಾಡುವಂತೆ, ಮನೆಯ ತೆರಿಗೆಯನ್ನೂ ಸಹ ಮನ್ನಾ ಮಾಡುವಂತೆ ಆಗ್ರಹಿಸಿದರು.
ಪಕ್ಷದ ಜಿಲ್ಲಾ ಮಹಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಂಕರ್ ಕಟ್ಟಿಸಂಗಾವಿ, ಮನೋಹರ್ ಪೊದ್ದಾರ್, ಬಸವರಾಜ್ ಸಿದ್ರಾಮಗೋಳ್, ದೇವಿಂದ್ರ ಹಸನಾಪೂರ್, ಮಾಣಿಕ ಶಾಹಪೂರಕರ್ ಮುಂತಾದವರು ಪಾಲ್ಗೊಂಡಿದ್ದರು.