ಉಚಿತ ಬಸ್ ಬಾರದ ಪತ್ನಿ ಪತಿ ರಂಪಾಟ ಆತ್ಮಹತ್ಯೆಗೆ ಯತ್ನ

ಬೆಂಗಳೂರು,ಜೂ.೨೯- ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವು ಮಹಿಳೆಯರು ಪುಣ್ಯ ಕ್ಷೇತ್ರ, ಪ್ರವಾಸಿ ತಾಣ, ನೆಂಟರ ಮನೆ ಹೀಗೆ ಸಾಲು ಸಾಲು ಪಟ್ಟಿ ಮಾಡಿಕೊಂಡು ಕೆಎಸ್‌ಆರ್‌ಟಿಸಿ ಬಸ್ ಹತ್ತುತ್ತಿರುವುದು ಮನೆಯಲ್ಲಿರುವ ಕೆಲವು ಪತಿಯರಿಗೆ ಸಂಕಷ್ಟ ತಂದೊಡ್ಡಿದೆ.
ಬಸ್ ಹತ್ತಿ ಹೋಗುವ ಪತ್ನಿಯರು ಮನೆಗೆ ಬರುವುದು ಯಾವಾಗ ಎಂಬ ಪ್ರಶ್ನೆ ಪತಿಯರನ್ನು ಕಾಡುತ್ತಿರುವಾಗ ಮದ್ಯ ವ್ಯಸನಿ ಪತಿಯೊಬ್ಬ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಪತ್ನಿಗಾಗಿ ಮಾಡಿದ ರಂಪಾಟದ ವಿಡಿಯೊ ವೈರಲ್ ಆಗಿದೆ.ಹೊಸಕೋಟೆ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಬಂದು ನಿಂತಾಗ ಎಲ್ಲರೂ ಬಸ್ ಹತ್ತುತ್ತಿದ್ದರೆ, ಚಕ್ರದಡಿಯಿಂದ ಕೂಗಿಕೊಳ್ಳುತ್ತಿರುವುದು ಕೇಳಿಸಿದೆ. ಬಗ್ಗಿ ನೋಡಿದ ಎಲ್ಲರೂ ಗಾಬರಿಯಾಗಿದ್ದರು.ಚಕ್ರದಡಿ ಮಲಗಿ ರಂಪಾಟ ಮಾಡುತ್ತಿದ್ದ ಆತನಿಗೆ ಏನಪ್ಪಾ ನಿನ್ನ ಕಥೆ ಎಂದು ಕೇಳಿದರೆ, ಶುರುವಾಯಿತು “ಹೆಂಡತಿ ಸಂಕಟ”. ನನ್ನ ಪತ್ನಿ ಮನೆಗೆ ಬಂದಿಲ್ಲ ಎಂದು ಗಲಾಟೆ ಶುರು ಮಾಡಿದ್ದಾನೆ.ಅಯ್ಯೋ ನಿನ್ನ ಪತಿ ಮನೆಗೆ ಬಾರದಿರುವುದಕ್ಕೂ ನೀನಿಲ್ಲಿ ಬಸ್ ಕೆಳಗೆ ಚಕ್ರಕ್ಕೆ ತಲೆ ಕೊಡುವುದಕ್ಕೂ ಏನಯ್ಯಾ ಸಂಬಂಧ ಎಂದು ಅಲ್ಲಿದ್ದ ಜನ ಕೇಳಿದ್ದಾರೆ. ಮಹಿಳೆಯರಿಗೆ ಫ್ರೀ ಬಸ್ ಮಾಡದೆ ಇದ್ದರೆ ಎಲ್ಲರೂ ಮನೆಯಲ್ಲೇ ಇರುತ್ತಿದ್ದರು. ಈಗ ನೋಡಿ ನನ್ನ ಪತ್ನಿ ಟ್ರಿಪ್‌ಗೆಂದು ಹೋದವಳು ಇನ್ನೂ ಮನೆಗೆ ಬಂದಿಲ್ಲ ಎಂದು ಕೂಗಾಡಿದ್ದಾನೆ.ಮಹಿಳೆಯರಿಗೆ ಈಗ ನೀಡಿರುವ ಫ್ರೀ ಬಸ್ ಪ್ರಯಾಣವನ್ನು ರದ್ದು ಮಾಡಲಿ ಎಂದು ಕೂಗಾಡ ತೊಡಗಿದ್ದಾನೆ. ಈ ವೇಳೆ ಬಸ್ ನಿರ್ವಾಹಕರು, “ಮೊದಲು ಅಲ್ಲಿಂದ ಹೊರಗೆ ಬಾರಯ್ಯ” ಎಂದು ಕೇಳಿದ್ದಾರೆ. ಅದಕ್ಕೆ ಆತ, “ಇಲ್ಲ ನನ್ನ ಪತ್ನಿ ಮನೆಗೆ ಬರುವವರೆಗೂ ನಾನು ಬರಲಾರೆ. ನೀವು ಬಸ್ ಚಾಲಿಸಿ, ಈ ಚಕ್ರಕ್ಕೆ ತಲೆ ಕೊಟ್ಟು ಸಾಯುವೆ ಎಂದು ಕೂಗಾಡಿದ್ದಾನೆ. ಕೊನೆಗೆ ಆತನನ್ನು ಹೇಗೋ ಹೊರಗೆ ಕರೆ ತಂದಿದ್ದಾರೆ. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಲಾಗಿದೆ