ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ

ಬೈಲಹೊಂಗಲ,ಜೂ 12: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಮಹಿಳೆಯರ ಕುಟುಂಬ ನಿರ್ವಹಣೆಯ ಆರ್ಥಿಕ ಹೊರೆ ಕಡಿಮೆ ಮಾಡಲಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ರವಿವಾರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿ,
ಯೋಜನೆಯಿಂದ ಮಹಿಳೆಯರ ಕುಟುಂಬ ನಿರ್ವಹಣೆಗೆ ಇದು ತುಂಬಾ ಸಹಕಾರಿಯಾಗಲಿದೆ. ಅನಾವಶ್ಯಕವಾಗಿ ಇದರ ದುರುಪಯೋಗವಾಗಬಾರದು ಎಂದರು.
ಈ ಶಕ್ತಿ ಯೋಜನೆ ಬಡವರ ಆರ್ಥಿಕ ಹೊರೆಯನ್ನು ತಗ್ಗಿಸುವ ಕೆಲಸ ಮಾಡಲಿದೆ. ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಸರಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳಲ್ಲಿ ಒಂದನ್ನು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಈ ಯೋಜನೆ ಜನತೆಗೆ ನೀಡಿದೆ ಎಂದರು.
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಮಾತನಾಡಿ, ಬಡ ಕೂಲಿಕಾರ್ಮಿಕರು ದೂರದ ಪ್ರದೇಶಕ್ಕೆ ಕೆಲಸಕ್ಕೆ ತೆರಳಲು ಇದು ಅನುಕೂಲವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.