ಲಕ್ಷ್ಮೇಶ್ವರ,ಜೂ12: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ' ಯೋಜನೆಗೆ ಭಾನುವಾರ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಅವರು ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು
ಚುನಾವಣೆ ಪೂರ್ವದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅವುಗಳಲ್ಲಿ ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ಧೇಶದಿಂದ ಈ ಯೋಜನೆ ಜಾರಿಗೆ ಬಂದಿದೆ. ಪ್ರತಿದಿನ ದುಡಿಯಲು ಹೋಗುವ ಮಹಿಳೆಯರಿಗೆ ಇದರಿಂದ ಸಾಕಷ್ಟು ಅನುಕೂಲ ಆಗಲಿದೆ. ಅಲ್ಲದೆ ಪರೋಕ್ಷವಾಗಿ ಈ ಯೋಜನೆ ಪುರುಷರಿಗೂ ಅನುಕೂಲ ಆದಂತಾಗಿದೆ. ಕಾರಣ ಮನೆಯ ಹೆಣ್ಣು ಮಕ್ಕಳು ಬೇರೆ ಬೇರೆ ಊರಿಗೆ ಹೋಗಬೇಕಾದರೆ ಪುರುಷರೇ ಅವರಿಗೆ ಬಸ್ ಚಾರ್ಜ್ ನೀಡಬೇಕಿತ್ತು. ಆದರೀಗ ಆ ತೊಂದರೆ ತಪ್ಪಿದಂತಾಗಿದೆ’ ಎಂದ ಅವರು ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ' ಎಂದರು. ಲಕ್ಷ್ಮೇಶ್ವರ ಸಾರಿಗೆ ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಮಾತನಾಡಿ
ಸರ್ಕಾರ ಸೂಚಿಸಿರುವ ಅಗತ್ಯ ದಾಖಲೆಗಳನ್ನು ಮಹಿಳಾ ಪ್ರಯಾಣಿಕರು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರು ಯೋಜನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ರಾಮಣ್ಣ ಲಮಾಣಿ ಶಿಗ್ಲಿ, ಜಯಕ್ಕ ಕಳ್ಳಿ, ನೀಲಪ್ಪ ಶೆರಸೂರಿ, ಮುದಕಣ್ಣ ಗದ್ದಿ, ಕಿರಣ ನವಲೆ, ಅಂಬರೀಷ ತೆಂಬದಮನಿ, ಫಕ್ಕೀರೇಶ ನಂದೆಣ್ಣವರ, ಮಾನಪ್ಪ ಲಮಾಣಿ, ಪರಮೇಶ್ವರ ಲಮಾಣಿ, ತಿಪ್ಪಣ್ಣ ಸಂಶಿ, ಸುರೇಶ ಹಟ್ಟಿ, ರಾಮು ಗಡದವರ, ರಾಜಣ್ಣ ಕುಂಬಿ, ತಹಶೀಲ್ದಾರ ಕೆ.ಆನಂದಶೀಲ ಮತ್ತಿತರರು ಇದ್ದರು.