ಉಚಿತ ಪ್ರಯಾಣ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ

ಬೆಂಗಳೂರು,ಆ.೨- ರಾಜ್ಯದಲ್ಲಿ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇದುವರೆಗೂ ೨೫೦.೯೬ ಕೋಟಿ ರೂಪಾಯಿ ಮೊತ್ತದ ಉಚಿತ ಪ್ರಯಾಣವಾಗಿದ್ದು ಅದರಲ್ಲಿ ರಾಜ್ಯ ಸರ್ಕಾರ, ಸಾರಿಗೆ ಸಂಸ್ಥೆಗಳಿಗೆ ೧೨೫.೪೮ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಶಕ್ತಿ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಹೀಗಾಗಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಮೊತ್ತದ ಪೈಕಿ ಅರ್ಧದಷ್ಟು ಹಣವನ್ನು ಸಾರಿಗೆ ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ. ಇದರಿಂದ ಸಾರಿಗೆ ಸಂಸ್ಥೆಗಳು ತುಸು ನಿರಾಳವಾಗಿವೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಮೊದಲ ಕಂತಿನ ಹಣ ಬಿಡುಗಡೆ ಮಾಡಿದೆ. ಆದರೆ, ಮೊದಲ ಕಂತಿನ ಸಂಪೂರ್ಣ ಹಣ ಬಿಡುಗಡೆ ಮಾಡದೇ ಇರುವುದು ರಸ್ತೆ ಸಾರಿಗೆ ನೌಕರರ ಆತಂಕಕ್ಕೆ ಕಾರಣವಾಗಿದೆ.ಜೂ. ೧೧ ರಿಂದ ಶಕ್ತಿ ಯೋಜನೆ ಜಾರಿಯಾಗಿದ್ದು ಜು. ೩೦ರವರೆಗೆ ಶಕ್ತಿ ಯೋಜನೆಯ ವೆಚ್ಚ ೬೮೭.೪೯ ಕೋಟಿ ರೂ. ಆಗಿದೆ. ರಾಜ್ಯ ಸರ್ಕಾರ ಜೂ. ೧೧ರಿಂದ ಜೂ.೩೦ರವರೆಗೆ ಶಕ್ತಿ ಯೋಜನೆಯಡಿ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ೨೫೯.೯೬ ಕೋಟಿ ರೂ. ವೆಚ್ಚವಾಗಿತ್ತು. ಈ ಹಣ ಬಿಡುಗಡೆ ಮಾಡುವಂತೆ ಕೋರಲಾಗಿತ್ತು.ರಾಜ್ಯ ಸರ್ಕಾರ ಒಟ್ಟು ೧೨೫.೪೮ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.ಜೂ. ೧೧ರಿಂದ ಜು.೩೦ರವರೆಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಮೌಲ್ಯದ ಮೊತ್ತ ೬೮೭,೪೯,೫೭,೭೫೩ ರೂ.ಗಳಾಗಿದೆ. ಈ ಪೈಕಿ ಕೆಎಸ್‌ಆರ್‍ಟಿಸಿಯಲ್ಲಿ ೨೬೦.೨೬ ಕೋಟಿ ರೂ.ಗಳಾಗಿದೆ. ಬಿಎಂಟಿಸಿಯಲ್ಲಿ ೧೨೨.೮೫ ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ೧೭೨.೯೮ ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ೧೩೧.೩೮ ಕೋಟಿ ರೂಪಾಯಿ ಆಗಿದೆ.
ಯಾವ ನಿಗಮಗಳಿಗೆ ಎಷ್ಟು
ಕೆಎಸ್‌ಆರ್ ಟಿಸಿಗೆ – ೪೭.೧೫ ಕೋಟಿ ರೂ.
ಬಿಎಂಟಿಸಿಗೆ – ೨೧.೮೫ ಕೋಟಿ ರೂ.,
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ -೩೨.೫೭ ಕೋಟಿ ರೂ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ -೨೩.೯೦ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.
ಸಿಎಂ ಸಂತೃಪ್ತಿ
ರಾಜ್ಯಾದ್ಯಂತ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಯಶಸ್ವಿಯಾಗಿರುವುದಕ್ಕೆ ಸಂತೃಪ್ತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೇ ಸಮಾಜದ ಎಲ್ಲ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು” ಯೋಜನೆ ಜಾರಿಯಾಗಿರುವುದಕ್ಕೆ ಖುಷಿ ಇದೆ ಎಂದು ತಿಳಿಸಿದ್ದಾರೆ.