ಬೆಂಗೂರು, ಮಾ.೮-ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣ ಘೋಷಿಸಿದ್ದ ಹಿನ್ನೆಲೆ ನಗರದ ಎಲ್ಲೆಡೆ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಇಲ್ಲದೆ, ಪ್ರಯಾಣಿಸಿ ಗಮನ ಸೆಳೆದರು.
ಇಲ್ಲಿನ ಶಾಂತಿನಗರ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಿವಾಜಿನಗರ, ಆರ್‌ಟಿನಗರ, ಹೆಬ್ಬಾಳ, ವಿಜಯನಗರ, ಕೆಂಗೇರಿ, ಜಯನಗರ, ಜೆಪಿನಗರ, ಬಿಟಿಎಂ ಲೇಔಟ್ ಸೇರಿದಂತೆ ರಾಜಧಾನಿಯ ವಿವಿಧೆಡೆ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ ಸಾವಿರಾರರು ಮಹಿಳೆಯರು ಟಿಕೆಟ್ ಪಡೆಯದೆ, ಪ್ರಯಾಣ ಬೆಳೆಸಿ ಸಂತಸ ವ್ಯಕ್ತಪಡಿಸಿದರು.
ಪ್ರಮುಖವಾಗಿ ವಜ್ರ, ವಾಯುವಜ್ರ ಸೇರಿ ಎಲ್ಲ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರು. ಬಿಎಂಟಿಸಿ ೪೮ ಘಟಕಗಳು, ೫೦ ಬಸ್ ನಿಲ್ದಾಣಗಳು, ೬,೬೦೦ ಬಸ್‌ಗಳನ್ನು ಹೊಂದಿದ್ದು, ಪ್ರತಿನಿತ್ಯ ೫೪ ಸಾವಿರ ಸುತ್ತುವಳಿಗಳಲ್ಲಿ ೧೦.೮೪ ಲಕ್ಷ ಕಿಲೋ ಮೀಟರ್ ಕ್ರಮಿಸುತ್ತಿದೆ. ಸರಾಸರಿ ೨೯ ಲಕ್ಷ ಪ್ರಯಾಣಿಕರು ನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ನಡುವೆ ಇಂದು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದು ವಿಶೇಷವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಯೊಬ್ಬರು, ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು. ಮಹಿಳೆಯರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಉಪಯೋಗಿಸುವುದರಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಿದಂತಾಗಲಿದೆ ಎಂದು ಹೇಳಿದರು.

ಮಹಿಳಾ ಪ್ರಯಾಣಿಕರಾದ ರಾಧಾ ಎಂಬುವರು ಈ ಕುರಿತು ಪ್ರತಿಕ್ರಿಯಿಸಿ, ನಾನು ಕೆಆರ್‌ಪುರದಿಂದ ಕೆಆರ್ ಮಾರುಕಟ್ಟೆವರೆಗೂ ಪ್ರತಿನಿತ್ಯ ಬಸ್ಸಿನಲ್ಲಿಯೇ ಪ್ರಯಾಣ ಮಾಡುತ್ತೇನೆ. ಇಂದು ಉಚಿತವಾಗಿದ್ದ ರಿಂದ ನನ್ನ ಪ್ರಯಾಣ ದರ ಉಳಿಯಿತು. ನಾನು ಬಿಎಂಟಿಸಿ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಬುಧವಾರ ಮಧ್ಯರಾತ್ರಿ ೧೨ ಗಂಟೆಯವರೆಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಯಾವುದೇ ದಾಖಲಾತಿ, ಗುರುತಿನ ಚೀಟಿಯೂ ಅವಶ್ಯಕತೆ ಇಲ್ಲ. ಅಲ್ಲದೆ, ಕಳೆದ ವ? ಜ.೧೫ ರಂದು ಬಿಎಂಟಿಸಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿತ್ತು. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ಬೆಳ್ಳಿ ಮಹೋತ್ಸವ ಹಿನ್ನೆಲೆ ಈ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿತ್ತು. ಅಂದು ಲಕ್ಷಾಂತರ ಮಂದಿ ಉಚಿತವಾಗಿ ಪ್ರಯಾಣಸಿದ್ದರು.