ಉಚಿತ ಪ್ರಯಾಣ: ದೇವಾಲಯಗಳ ಆದಾಯ ಹೆಚ್ಚಳ

ಬೆಳಗಾವಿ,ಜು.೧೩-ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು ಒಂದು ತಿಂಗಳು ಪೂರೈಸಿದೆ. ಇದರಿಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ದೇವಾಲಯಗಳಿಗೆ ಆದಾಯ ಹರಿದು ಬಂದಿದೆ.
ಸವದತ್ತಿಯ ಪ್ರಸಿದ್ಧ ದೇಗುಲ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇಗುಲದ ಹುಂಡಿ ಏಣಿಕೆ ಕಾರ್ಯ ನಿನ್ನೆ ಪೂರ್ಣಗೊಂಡಿದೆ. ಕೇವಲ ಒಂದೇ ತಿಂಗಳಲ್ಲಿ ಚಿನ್ನಾಭರಣ ಸೇರಿಂದತೆ ೧.೩೭ ಕೋಟಿ ರೂ ಹಣ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರಲ್ಲಿ ೧,೩೦,೪೨,೪೭೨ ರೂ. ನಗದು, ೪.೪೪ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೨.೨೯ ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣಗಳು ಸೇರಿವೆ.
ರಾಜ್ಯವಲ್ಲದೆ ಬೇರೆ ರಾಜ್ಯದ ಭಕ್ತರು ಕೂಡ ಯಲ್ಲಮ್ಮನ ದೇವಿ ದರ್ಶನಕ್ಕೆ ಬರುತ್ತಾರೆ. ಅದರಲ್ಲೂ ಈ ಬಾರಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಿದ್ದರಿಂದ ದೇಗುಲಗಳಿಗೆ ಆಗಮಿಸುವ ಭಕ್ತರ ಸಂಖ್ಯೆಯು ಹೆಚ್ಚಾಗಿತ್ತು. ಇದರಿಂದಾಗಿ ದೇಗುಲದ ಆದಾಯವೂ ಹೆಚ್ಚಾಗಿದೆ.
ಈ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ. ಮಹೇಶ, ಜೂನ್‌ನಲ್ಲಿ ಯಲ್ಲಮ್ಮ ದೇಗುಲಕ್ಕೆ ಬಂದ ಭಕ್ತರು ೪೫ ದಿನದಲ್ಲಿ ೧.೩೭ ಕೋಟಿ ರೂ ಮೌಲ್ಯದ ಕಾಣಿಕೆ ಅರ್ಪಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿಯೂ ಕಾಣಿಕೆ ಪ್ರಮಾಣ ಹೆಚ್ಚಿದೆ. ಈ ಮೊತ್ತವನ್ನು ರಿಂಗ್ ರಸ್ತೆ, ತಂಗುದಾಣ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಬಳಸಲಾಗುವುದು” ಎಂದು ಮಾಹಿತಿ ನೀಡಿದರು.
ಕೇವಲ ಸವದತ್ತಿ ಯಲ್ಲಮ್ಮ ದೇಗುಲ ಮಾತ್ರವಲ್ಲದೆ ದಕ್ಷಿಣ ಕಾಶಿ ಎಂದೆ ಪ್ರಸಿದ್ಧಿ ಹೊಂದಿರುವ ನಂಜುಂಡೇಶ್ವರನಿಗೂ ಭಕ್ತರು ಅಪಾರ ಭಕ್ತಿ ತೋರಿದ್ದು ಒಂದೇ ತಿಂಗಳಲ್ಲಿ ೧.೭೭ ಕೋಟಿ ರೂ ಕಾಣಿಕೆ ಅರ್ಪಿಸಿದ್ದಾರೆ. ದೇಗುಲದ ಆಡಳಿತ ಮಂಡಳಿ ನಿನ್ನೆ ಹುಂಡಿ ಎಣಿಕೆ ಮಾಡಿದ್ದು, ದೇಗುಲದಲ್ಲಿರುವ ೩೪ ಹುಂಡಿಗಳಲ್ಲಿ ೧,೭೭,೦೮,೭೧೦ ಕೋಟಿ ರೂ. ನಗದು, ೬೫ ಗ್ರಾಂ ಚಿನ್ನ, ೩.೫ ಕೆಜಿ ಬೆಳ್ಳಿ, ೬೪ ವಿದೇಶಿ ಕರೆನ್ಸಿ ದೊರೆತಿದೆ. ಈ ಮೂಲಕ ಶಕ್ತಿ ಯೋಜನೆಯ ಪರಿಣಾಮವಾಗಿ ದೇಗುಲದ ಆದಾಯದ ಮಟ್ಟವೂ ಹೆಚ್ಚಳವಾಗಿದೆ.