ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.19 ದಿನದ 24 ಗಂಟೆಯು ಜನ ಸಂಚಾರಕ್ಕೆ ಹೆಸರುವಾಸಿಯಾದ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣ ರಾಜ್ಯ ಸರ್ಕಾರದ ಉಚಿತ ಪ್ರಯಾಣದ ವಿಕೇಂಡ್ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಜನ ಜಂಗುಳಿಯಿಂದ ತುಂಬಿ ತುಳಕಿತ್ತು.
ವಿಶ್ವಪರಂಪರೆ ಹಾಗೂ ಐತಿಹಾಸಿಕ ತಾಣ ಹಂಪಿ, ಹೊಸಪೇಟೆ ಪಕ್ಕದ ಪುಣ್ಯಕ್ಷೇತ್ರ ಹುಲಿಗಿ ಸೇರಿದಂತೆ ಮನೋರಂಜನಾ ತಾಣಗಳ ವೀಕ್ಷಣೆಗೆ ವೀಕೆಂಡ್ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು. ಮಹಿಳೆಯರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಬಸ್ ನಿಲ್ದಾಣ ಜನಜಂಗುಳಿಯಿಂದ ತುಂಬಿ ತುಳಕಿತ್ತು.
ಸಾವಿರಾರು ಅಧಿಕ ಪ್ರವಾಸಿಗರು ಆಗಮಿಸಿದ್ದರು. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆಕಾಳು ಗಣಪತಿ ಮಂಟಪ, ಕಡಲೆ ಕಾಳು ಗಣೇಶ ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸಿದರು. ಹಂಪಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರಿಂದ ಪೊಲೀಸರು ಕೂಡ ನದಿ ತೀರದಲ್ಲಿ ಬಂದೋಬಸ್ತ್ ಕೈಗೊಂಡಿದ್ದರು.
ಮಣ್ಣೆತ್ತಿನ ಅಮಾವ್ಯಾಸೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಹಂಪಿಗೆ ಆಗಮಿಸಿದರು. ಶ್ರೀವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಉದ್ದಾನವೀರಭದ್ರೇಶ್ವರ ದೇವರ ದರ್ಶನ ಪಡೆದರು. ಇನ್ನೂ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಹಂಪಿ, ಹುಲಿಗಿ ಕಡೆಗೆ ತೆರಳಲು ಮಹಿಳೆಯರು ಬಸ್ ನಿಲ್ದಾಣದಲ್ಲಿ ಸಾಲುಗಟ್ಟಿದ್ದರು ಜನ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟಿಕೇಟ್ ನೀಡಲು ಸಾಧ್ಯವಾಗದಂತೆ ಮಹಿಳೆಯರು ಬಸ್‍ಗಳಲ್ಲಿ ನುಕುನುಗ್ಗಲು ಏರ್ಪಟ್ಟಿತು.
ಪ್ರಯಾಣಿಕರ ಸಂಚಾರ ನಿಯಂತ್ರಿಸಲು ಸಿಬ್ಬಂದಿಗಳು ಹರಸಹಾಸ ಪಡುತ್ತಿದ್ದು ಮಾತಿನ ಚಕಮಕಿ, ಗೊಂದಲ ಮತ್ತು ಸಮಜಾಯಿಸಿ ನೀಡುವಲ್ಲಿ ಸಿಬ್ಬಂದಿ ಸುತ್ತಾಗಿದ್ದರು.