ಉಚಿತ ನೇತ್ರ ತಪಾಸಣಾ ಶಿಬಿರ: ಪದಾಧಿಕಾರಿಗಳ ಪದಗ್ರಹಣ

ಲಕ್ಷ್ಮೇಶ್ವರ,ಸೆ.14: ಯುವಕರು ಭವ್ಯ ಭಾರತ ನಿರ್ಮಾಣದ ಮೂಲಪುರುಷರಾಗಿದ್ದು ಉತ್ತಮ ಶಿಕ್ಷಣ, ಸಮಯದ ಸದುಪಯೋಗ, ಸದ್ಗುಣ, ಸದ್ವಿಚಾರ, ನಾಯಕತ್ವಗುಣ, ಆರೋಗ್ಯ, ಸಮಾಜಕ್ಕೆ ಶ್ರೇಷ್ಠವಾದುದನ್ನು ಕೊಡುವ ಮನೋಧರ್ಮ ರೂಢಿಸಿಕೊಳ್ಳಬೇಕು ಎಂದು ಶ್ವಾಸಗುರು ಹಾಗೂ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕುಂದ್ರಳ್ಳಿ ಗ್ರಾಮ ಘಟಕದ ವತಿಯಿಂದ ಸೋಮವಾರ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ತಾಲೂಕು ಸಂಘದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗಿದ್ದು ಸಮಾಜ ಬಾಂಧವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಆರೋಗ್ಯ ಕಲ್ಪಿಸಬೇಕು. ಮಕ್ಕಳು ಹಿರಿಯರನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಲಿಯುತ್ತವೆಯಾದ್ದರಿಂದ ಪಾಲಕರು ನಿತ್ಯ ಜೀವನದಲ್ಲಿ ಯೋಗ, ಧ್ಯಾನ, ಸತ್ಕಾರ್ಯ, ಧರ್ಮ ಮಾರ್ಗದಲ್ಲಿ ನಡೆಯಬೇಕು. ಅಂದಾಗ ಮಾತ್ರ ನಮ್ಮ ಮಕ್ಕಳು ಸನ್ನಡತೆ, ಸನ್ಮಾರ್ಗದಲ್ಲಿ ಮುನ್ನಡೆಯುತ್ತಾರೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಕರ್ತವ್ಯ ಪ್ರಜ್ಞೆ, ಕೆಲಸ ಮತ್ತು ದುಡ್ಡಿನ ಮಹತ್ವದ ಬಗ್ಗೆ ತಿಳಿಸಬೇಕು. ಲಕ್ಷ್ಮೇಶ್ವರ ತಾಲೂಕು ಘಟಕ ಸಮಾಜ ಸಂಘಟನೆಯ ಜತೆಗೆ ನೇತ್ರ ಚಿಕಿತ್ಸೆ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜತೆಗೆ ಪೀಠ ಮತ್ತು ರಾಜ್ಯ ಸಂಘ ನಿರಂತರ ಸಂಪರ್ಕದಲ್ಲಿದೆ. ಸರ್ಕಾರವೂ ಸ್ಫಂಧಿಸುವ ಭರವಸೆ ನೀಡಿದ್ದು ಮೀಸಲಾತಿಯನ್ನು ಕಾನೂನಾತ್ಮಕವಾಗಿ ಪಡೆಯಬೇಕಾಗಿರುವುದರಿಂದ ಈ ನಿಟ್ಟಿನಲ್ಲಿ ಸಮಾಜದ ಪರವಾದ ನಿಲುವು ತಮ್ಮದಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಕುಂದ್ರಳ್ಳಿಯಲ್ಲಿ ಪಂಚಮಸಾಲಿ ಸಮಾಜದ ಲಕ್ಷ್ಮೇಶ್ವರ ತಾಲೂಕು ಯುವ ಘಟಕ, ರೈತ ಘಟಕ, ಲಕ್ಷ್ಮೇಶ್ವರ ನಗರ ಘಟಕ, ಕುಂದ್ರಳ್ಳಿ ಗ್ರಾಮ ಘಟಕ ಹಾಗೂ ಮಹಿಳಾ ಘಟಕಗಳನ್ನೊಳಗೊಂಡು ಒಟ್ಟು 220 ಜನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಮಹಾಂತಶೆಟ್ಟರ ದಂಪತಿಗಳು, ರಾಜ್ಯ ಯುವ ಘಟಕದ ಅಧ್ಯಕ್ಷ ಬಸವರಾಜ ನವಲಗುಂದ, ಗದಗ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಠಿ, ಕೆಎಸ್‍ಆರ್‍ಟಿಸಿ ನಿಗಮದ ನಿರ್ದೇಶಕ ಶರಣಪ್ಪ ಪಾಟೀಲ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರಶ್ಮಿ ನಾಗರಾಜ, ರಾಜ್ಯ ಘಟಕದ ವಸಂತ ಹುಲ್ಲತ್ತಿ, ಸುಷ್ಮಾ ಪಾಟೀಲ, ಗೀತಾ ಕಾಕೋಳ, ಅನ್ನಪೂರ್ಣ ಮಹಾಂತಶೆಟ್ಟರ, ಸಾವಿತ್ರಿ ಪಡೆಸೂರ, ದೇವಣ್ಣ ಬಳಿಗಾರ, ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಶಿವನಗೌಡ ಅಡರಕಟ್ಟಿ, ಎಂ.ಡಿ.ಪಾಟೀಲ, ಈಶ್ವರಪ್ಪ ಮೇಟಿ, ಶಿವಜೋಗೆಪ್ಪ ಹಮ್ಮಗಿ, ಮಂಜುನಾಥ ಗೌರಿ, ಫಕ್ಕಿರೇಶ ಕವಲೂರ, ಬಸವರಾಜ ಮೇಟಿ, ಸಂಜೀವ ಹಂಗನಕಟ್ಟಿ, ಮಂಜುನಾಥ ಕಣವಿ, ಮಂಜುನಾಥ ಹಂಗನಕಟ್ಟಿ, ಸುನೀಲ ಮುಳಗುಂದ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ ಸೇರಿ ಗ್ರಾಮದ ಹಿರಿಯರು, ಮಹಿಳೆಯರು ಹಾಜರಿದ್ದರು. ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಅಧ್ಯಕ್ಷತೆವಹಿಸಿದ್ದರು. ಜಿ.ಎಸ್.ಗುಡಗೇರಿ, ಚಂದ್ರು ಮಾಗಡಿ ನಿರೂಪಿಸಿದರು.
ಉಚಿತ ನೇತ್ರ ಚಿಕಿತ್ಸೆ:
ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ತಾಲೂಕ ವೈದ್ಯಾಧಿಕಾರಿಗಳು, ಕುಂದ್ರಳ್ಳಿ ಉಪ ಆರೋಗ್ಯ ಕೇಂದ್ರಗಳ ಆಶ್ರಯದಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆದು 220 ಜನ ಚಿಕಿತ್ಸೆಗೊಳಪಟ್ಟು 148 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. ಇವರಲ್ಲಿ ಪ್ರತಿದಿನ 30 ಜನರಂತೆ ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆಯವರು ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಕಳುಹಿಸುವ ಕಾರ್ಯ ಮಾಡುತ್ತಿದ್ದಾರೆ. ಶಿಬಿರದಲ್ಲಿ ಡಾ. ಮಹೇಶ ಕುಲಕರ್ಣಿ, ಡಾ. ಕೀರ್ತಿ ಕಾಟವೆ, ಡಾ. ಆಶಾ ಬಾಳಿಕಾಯಿ, ಡಾ. ಬಸವರಾಜ ಕರಕಟ್ಟೆ, ಡಾ. ಶೈನಜಾ ಸಿಬ್ಬಂದಿ ಇದ್ದರು.