ಉಚಿತ ನೇತ್ರಾ ತಪಾಸಣೆ: ಅಂಧತ್ವ ಮುಕ್ತ ತಾಲ್ಲೂಕಿಗೆ‌ ಸಂಕಲ್ಪ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.22: ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ವತಿಯಿಂದ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
 ಕರ್ನಾಟಕ ಘನ ಸರ್ಕಾರ ಹಾಗೂ ಬಳ್ಳಾರಿ ಜಿಲ್ಲಾಡಳಿತ ಆಶಯದಂತೆ ಅಂಧತ್ವಮುಕ್ತ ಬಳ್ಳಾರಿ ಆಗಬೇಕು ಎಂಬ ಸಂಕಲ್ಪ ಹೊಂದಲಾಗಿದೆ.
 ತಾಲ್ಲೂಕಿನ ಪ್ರತಿಯೊಬ್ಬ ನಾಗರೀಕ ಕೂಡ ಕಣ್ಣಿನ ತೊಂದರೆ ಹಾಗೂ ದೃಷ್ಟಿ ದೋಷಗಳಿಂದ ಮುಕ್ತರಾಗಿ ಆರೋಗ್ಯಕರ, ಸ್ವಸ್ಥ, ಸ್ವತಂತ್ರ ಜೀವನ ನಡೆಸಬೇಕು ಎಂಬುದು ಮಾನ್ಯ ಶಾಸಕರಾದ ಬಿ. ಎಂ. ನಾಗರಾಜ್ ಅವರ ಆಶಾಯವಾಗಿದೆ ಈ ನಿಟ್ಟಿನಲ್ಲಿ ನಡೆದ ಶಿಬಿರದಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು ಸುಮಾರು 280 ಜನರು ಕಣ್ಣಿನ ಕ್ಯಾಟರೆಕ್ಟ್ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ,
ಸುಮಾರು 80 ಜನರಿಗೆ  ದೃಷ್ಟಿ ದೋಷ ನಿವಾರಣೆ ಸಂಬಂಧ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ.
 ಆಯ್ಕೆಯಾದ ಫಲಾನುಭವಿಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಯ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ನಂತರ ಮರಳಿ ಸ್ವಸ್ಥಾನಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು.
ಸರಕಾರದ ಈ ಯೋಜನೆಯನ್ನು ತಾಲೂಕಿನ ಜನತೆ ಪ್ರಯೋಜನ ಪಡೆದುಕೊಳ್ಳಲು ಮಾನ್ಯ ಶಾಸಕರಾದ ಬಿ.ಎಂ ನಾಗರಾಜ್  ಅವರು ಕರೆ ನೀಡಿದ್ದಾರೆ.
 ಕಣ್ಣು ಮನುಷ್ಯನ ಪ್ರಧಾನ ಅಂಗ ಜಿಲ್ಲೆಯ ಜನತೆ ದೃಷ್ಟಿದೋಷದ ಕಾರಣದಿಂದಾಗಿ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬಾರದು ಹಾಗೂ ಬದುಕಿನ ಸಂಧ್ಯಾಕಾಲದಲ್ಲಿ ವಯೋವೃದ್ಧರು ದೈನಂದಿನ ಕರೆಗಳಿಗೆ ಕೂಡ ಪರಾವಲಂಬಿಯಾಗುವುದನ್ನು ತಪ್ಪಿಸುವ ಸದುದ್ಧೇಶದಿಂದ ಜಿಲ್ಲಾ ಖನಿಜ ನಿಧಿಯಡಿಯಲ್ಲಿ  ಅಂಧತ್ವಮುಕ್ತವಾಗಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಡಿ.ಎಚ್.ಒ ಜನಾರ್ಧನ್  ತಿಳಿಸಿದ್ದಾರೆ.
  ತಾಲೂಕು ಆರೋಗ್ಯಾಧಿಕಾರಿ ಡಾ. ಈರಣ್ಣ, ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿಯವರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸಾದ್ ಹಾಗೂ ನೇತ್ರಾಧಿಕಾರಿಗಳಾದ ಸಂಧ್ಯಾರಾಣಿ, ವರಲಕ್ಷ್ಮಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.