ಉಚಿತ ನಿವೇಶನ ನೀಡಲು ನಿರ್ಧಾರ-ಬಳ್ಳಾರಿ

ಬ್ಯಾಡಗಿ, ಏ 17: ಪಟ್ಟಣದ ಮಲ್ಲೂರು ರಸ್ತೆಯಲ್ಲಿರುವ ಕನಕದಾಸ ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಲು ಬಡಜನರಿಗೆ ಉಚಿತವಾಗಿ ನಿವೇಶನ ನೀಡಲು ನಿರ್ಧರಿಸಿರುವುದಾಗಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಜರುಗಿದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಲ್ಲೂರ ರಸ್ತೆಯಲ್ಲಿ ಆಶ್ರಯ ನಿವೇಶನ ಹಂಚಿಕೆ ಮಾಡಲು ಸ್ಥಳವನ್ನು ನಿಗದಿಪಡಿಸಿ ಜಿ-ಪ್ಲಸ್1 ಮಾದರಿ ಮನೆ ನಿರ್ಮಿಸುವ ಯೋಜನೆ ಮಾಡಲಾಗಿತ್ತು. ಈ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಜಾತಿ/ಪಂಗಡ ಪ್ರತಿ ಫಲಾನುಭವಿ ರೂ.2.80 ಮತ್ತು ಸಾಮಾನ್ಯವರ್ಗದ ಫಲಾನುಭವಿ ರೂ.3.20 ಲಕ್ಷಗಳನ್ನು ಪುರಸಭೆಗೆ ಭರಿಸಬೇಕಿತ್ತು. ಆದರೆ ಬಡ ಜನರಿಗೆ ಹಣ ತುಂಬಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಉಚಿತವಾಗಿ ನಿವೇಶನವನ್ನು ನೀಡಿ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಆಶ್ರಯ ನಿವೇಶನ ಹಂಚಿಕೆ ಮಾಡಲು ಬೇರೆಡೆ ಒಟ್ಟು 9.38 ಎಕರೆ ಹಾಗೂ 2ಎಕರೆ ಜಮೀನುಗಳು ಮಂಜೂರಾಗಿವೆ. ಆಶ್ರಯ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ನಿವೇಶನ ಒದಗಿಸಿ ಮನೆಗಳನ್ನು ನಿರ್ಮಿಸಿ ಉಚಿತವಾಗಿ ಹಂಚಿಕೆ ಮಾಡುವುದಾಗಿ ತಿಳಿಸಿದರಲ್ಲದೇ ಹಿಂದಿನ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾದ ಕೆಲ ಫಲಾನುಭವಿಗಳ ಆಯ್ಕೆಗಳಲ್ಲಿ ಗೊಂದಲಗಳಿದ್ದು, ಅದನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಲಾಗುವುದು, ಈ ಕುರಿತು ಯಾರೂ ಅನುಮಾನವನ್ನು ಪಡಬಾರದೆಂದು ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಮಾತನಾಡಿ, ಒಟ್ಟು 823 ಫಲಾನುಭವಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು ಮೊದಲ ಹಂತದಲ್ಲಿ 403 ಜನರಿಗೆ ನಿವೇಶನ ಹಂಚಿಕೆ ಮಾಡಿ, ಬಳಿಕ ಇನ್ನುಳಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು, ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಲು ಪಟ್ಟಣದ ಸುತ್ತಲೂ ಜಮೀನು ಬೇಕಾಗಿದ್ದು, ಯಾರಾದರೂ ಜಮೀನು ಮಾರಾಟಕ್ಕೆ ಮುಂದಾದಲ್ಲಿ ಸರ್ಕಾರದ ನಿಯಮಾನುಸಾರ ಜಮೀನು ಖರೀದಿಗೆ ಕ್ರಮ ವಹಿಸುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಆಶ್ರಯ ಸಮಿತಿ ಸದಸ್ಯರಾದ ಪರುಶರಾಮ ಉಜನಿಕೊಪ್ಪ, ಪ್ರೇಮಾ ಬೆನ್ನೂರ, ಬಸವರಾಜ ಹಾವನೂರ, ಅಲ್ಲಾಭಕ್ಷ ಹುಣಸೀಮರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.