ಉಚಿತ ಘೋಷಣೆ ಕೈ ವಿರುದ್ಧ ಇಬ್ರಾಹಿಂ ಕಿಡಿ

ಬೆಂಗಳೂರು,ಜ.೧೭-ಕಾಂಗ್ರೆಸ್‌ನ ಉಚಿತ ಘೋಷಣೆಗಳ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದು, ವಾರ್ಷಿಕ ಬಜೆಟ್ ಲೆಕ್ಕ ಹಾಕದೆ ಉಚಿತ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಲ್ಲ ಅಲ್ಲಿ ಯಾಕೆ ಈ ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿರುವ ಅವರು, ಉಚಿತ ಘೋಷಣೆಗಳಿಂದ ಜನರನ್ನು ಓಲೈಸುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಉಚಿತ ಘೋಷಣೆಗಳು ಸರಿಯಲ್ಲ. ಶ್ರಿಮಂತರ ಮನೆಯ ನಾಯಿ ಹೇಸಿಗೆ ಉಚಿತ ವಿದ್ಯುತ್ ಕೊಡುತ್ತಿರಾ. ಬಡವರ ಮನೆಗೆ ಕರೆಂಟ್ ಕೊಡುವ ಕೆಲಸ ಆಗಬೇಕಿದೆ ಎಂದರು.ರೈತರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮಾತನಾಡಿ, ಅದುಬಿಟ್ಟು ಏನೇನೋ ಮಾತನಾಡೋದು ಬೇಡ, ಪ್ರಿಯಾಂಕಾ ಗಾಂಧಿಗಂತೂ ಏನೂ ಗೊತ್ತಿಲ್ಲ. ಘೋಷಣೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಹೇಳಬೇಕಲ್ಲ. ರಾಜಸ್ತಾನದಲ್ಲಿ ಗೃಹಲಕ್ಷ್ಮಿ, ಸಂತಾನಲಕ್ಷ್ಮಿ, ಅಷ್ಠಲಕ್ಷ್ಮಿಗಳನ್ನು ಜಾರಿಗೆ ತಂದು ನಂತರ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್-ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ನೀತಿಗೆಟ್ಟವರು. ಈ ಪಾಪವನ್ನು ತೊಳೆದುಹಾಕಿ ಉತ್ತಮರಿಗೆ ಅಧಿಕಾರ ಕೊಡಿ ಎಂದು ಸಿ.ಎಂ. ಇಬ್ರಾಹಿಂ ಜನರಿಗೆ ಮನವಿ ಮಾಡಿದರು.