ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರ

ಬೀದರ:ಆ.28:ಕಾರ್ಮೇಲ್ ಸೇವಾ ಟ್ರಸ್ಟ್ ಮತ್ತು ಆರ್ಬಿಟ್ ಸಂಸ್ಥೆಯ ವತಿಯಿಂದ ಮರಖಲ್ ಗ್ರಾಮದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.

ಕ್ಯಾನ್ಸರ್ ಇದೊಂದು ಗುಣಮುಖವಾಗುವ ರೋಗವಾಗಿದೆ, ಆದರೆ ರೋಗವು ಬಾರದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಶಿಬಿರವನ್ನು ಉದ್ಘಾಟಿಸಿ, ಐ.ಸಿ.ಎಸ್. ಕೊ-ಆರ್ಡಿನೇಟರ್ ಶ್ರೀನಿಧಿ ಅವರು ಮಾತನಾಡಿದರು. ಇಂದು ಆರೋಗ್ಯ ಕ್ಷೇತ್ರವು ತುಂಬಾ ಮುಂದುವರೆದ ಕ್ಷೇತ್ರವಾಗಿದೆ. ಕ್ಯಾನ್ಸರ್ ಒಂದು ಸಾಮಾನ್ಯ ರೋಗದ ತರಹವಾಗಿದೆ ಎಂದು ಅವರು ಹೇಳಿದರು.

ತಾಲೂಕಾ ಪಂಚಾಯತ್ ಸದಸ್ಯರಾದ ಸಂಜಯಕುಮಾರ ಮಾತನಾಡಿ, ಶಿಬಿರದ ಸದುಪಯೋಗವನ್ನು ಗ್ರಾಮದ ಎಲ್ಲಾ ಜನರು ಪಡೆಯಬೇಕೆಂದು ಹೇಳಿದರು.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಮುಂದೆ ಬರುವ ಕ್ಯಾನ್ಸರ್‍ನಂತಹ ರೋಗಗಳಿಂದ ಮುಕ್ತಿ ಪಡೆಯಬಹುದು, ವೈದ್ಯರು ಹೇಳಿದ ಮಾರ್ಗದರ್ಶನದಲ್ಲಿ ನಡೆದರೆ ರೋಗಗಳಿಂದ ಮುಕ್ತಿ ಪಡೆಯಬಹುದೆಂದು ಸಿಸ್ಟರ್ ರೀತಾ ಅವರು ತಿಳಿಸಿದರು.

ಮರಖಲ್ ಗ್ರಾಮದ ಸಿ.ಎಚ್.ಓ. ಆದ ಸಂದೀಪಕುಮಾರ ರವರು ಈ ಶಿಬಿರದಲ್ಲಿ ಭಾಗವಹಿಸಿ, ಶಿಬಿರವನ್ನು ಯಶಸ್ವಿಯಾಗಿ ನಡೆಯಲು ಸಹಾಯ ಮಾಡಿದರು.

ಈ ಒಂದು ಶಿಬಿರವನ್ನು ವ್ಯವಸ್ಥಿತವಾಗಿ ನಡೆಯಲು ಕಾರ್ಮೇಲ್ ಸೇವಾ ಟ್ರಸ್ಟ್ ನಿರ್ದೇಶಕರಾದ ಸಿಸ್ಟರ್ ಕ್ರಿಸ್ಟೀನ್ ಮಿಸ್ಕಿತ್ ಅವರು ಪ್ರಮುಖ ಪಾತ್ರ ವಹಿಸಿದರು.

ಒಟ್ಟು 65 ಜನರು ಈ ಒಂದು ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ, ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

ಸಿಸ್ಟರ್ ಪ್ರಿಯಾ ಕಾರ್ಮೇಲ್ ಸಂಸ್ಥೆ ಮತ್ತು ಆರ್ಬಿಟ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.