ಉಚಿತ ಕೋವಿಡ್ ಲಸಿಕೆ ಪ್ರಧಾನಿ ದಿಟ್ಟ ನಿರ್ಧಾರ: ಕುಲಕರ್ಣಿ

ಕಲಬುರಗಿ,ಜೂ.8: 18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ಒದಗಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯು ಒಂದು ಐತಿಹಾಸಿಕ ದಿಟ್ಟ ನಿರ್ಧಾರವಾಗಿದೆ ಎಂದು ಬಿಜೆಪಿ ನಗರ ಜಿಲ್ಲಾ ಮಾಧ್ಯಮ ಪ್ರಮುಖ ಅರುಣ್ ಕುಲಕರ್ಣಿ ಅವರು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸೋಂಕು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ಪರೀಕ್ಷೆ, ಚಿಕಿತ್ಸೆ ಹಾಗೂ ಲಸಿಕೆ ಮೂರು ಸೂತ್ರಗಳಡಿ ಈಗಾಗಲೇ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಲಸಿಕೆ ಕಾರ್ಯವು ವೇಗವಾಗಿ ಆರಂಭವಾಗಿದೆ. ಈ ಹಂತದಲ್ಲಿ ಉಚಿತ ಕೋವಿಡ್ ಲಸಿಕೆ ಘೋಷಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿಕೆಯಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಗರೀಬ್ ಯೋಜನೆಯಡಿ ನವೆಂಬರ್‍ವರೆಗೆ ಉಚಿತ ಪಡಿತರ ವಿತರಣೆಗೂ ಸಹ ಕ್ರಮ ಕೈಗೊಂಡಿದ್ದಾರೆ. ಈ ಎರಡೂ ಕ್ರಮಗಳು ಕೋವಿಡ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.