ಉಚಿತ ಕೋವಿಡ್ ಪರೀಕ್ಷೆಗೆ ಮನವಿ

ತುಮಕೂರು, ನ. ೧೧- ಸಿರಾ ಉಪ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದ ಜನಸ್ತೊಮ ಕಂಡು ಕೊರೊನಾ ಸೊಂಕು ವೇಗವಾಗಿ ಹರಡುತ್ತದೆ ಎಂಬ ಗ್ರಾಮೀಣ ಪ್ರದೇಶದ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಕೊರೊನಾ ಪರೀಕ್ಷೆ ವ್ಯಾಪಕವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಪರೀಕ್ಷೆಗೆ ಒಳಗಾದರೆ ನೆಗಟಿವ್ ಇಲ್ಲವೇ ಪಾಸಿಟಿವ್ ಎಂಬ ಬಗ್ಗೆ ದೃಢಪಡಿಸಿಕೊಳ್ಳಬಹುದಾಗಿದೆ. ಈ ಪರೀಕ್ಷೆ ಉಚಿತವಾಗಿರಲಿದ್ದು ನ.೧೪.ರವರೆಗೆ ನಿರಂತರವಾಗಿ ನಡೆಯಲಿದೆ ಎಂದು ವೈದ್ಯಾಧಿಕಾರಿ ಡಾ.ತಿಮ್ಮರಾಜು ಹೇಳಿದರು.
ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ತಾಲ್ಲೂಕಿನ ದ್ವಾರನಕುಂಟೆ ಗ್ರಾಮದ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸಾರ್ವಜನಿಕವಾಗಿ ಕೊವಿಡ್-೧೯ ಪರೀಕ್ಷೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ೪೦ ಸಾವಿರ ಜನರಿಗೆ ಕೊರೊನಾ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದ್ದು ದ್ವಾರನಕುಂಟೆ ವ್ಯಾಪ್ತಿಯಲ್ಲಿ ೮೫೬ ಜನರಿಗೆ ಪರೀಕ್ಷೆ ನಡೆಸಿದ್ದು ಕೇವಲ ಇಬ್ಬರಿಗೆ ಮಾತ್ರ ಪಾಸಿಟಿವ್ ಸೊಂಕು ಕಂಡು ಬಂದಿದೆ. ಜನ ಜಾಗೃತರಾಗಿರುವ ಕಾರಣ ಹೆಚ್ಚು ಸೊಂಕು ಹರಡಲು ಸಾಧ್ಯವಾಗದೆ ನಿಯಂತ್ರಣದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ದ್ವಾರನಕುಂಟೆ ಗ್ರಾ.ಪಂ. ಪಿಡಿಓ ಸೀಬಿ ರಂಗಯ್ಯ, ಆರೋಗ್ಯ ಇಲಾಖೆಯ ಕಿಶೋರ್ ಅಹಮದ್, ಲ್ಯಾಬ್ ಟೆಕ್ನಿಷಿಯನ್ ರವಿಕುಮಾರ್, ಮುಖಂಡ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.