ಉಚಿತ ಉಜ್ವಲ ಯೋಜನೆ ಬಿಜೆಪಿ ಸರ್ಕಾರದ ಮೋಸ

ವಾಡಿ:ಮಾ.10: ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಸಿಲಿಂಡರ್ ಗ್ಯಾಸ್ ಸೌಲಭ್ಯ ಒದಗಿಸಿದ ಕೇಂದ್ರ ಬಿಜೆಪಿ ಸರ್ಕಾರ, ಈಗ ನಿರಂತರವಾಗಿ ಬೆಲೆ ಏರಿಗೆಯ ಭಾರ ಹೊರೆಸುವ ಮೂಲಕ ಬಡವರಿಗೆ ಮೋಸ ಮಾಡಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಆರೋಪಿಸಿದ್ದಾರೆ.

ಗೃಹಬಳಕೆ ಅನಿಲ ಸಿಲಿಂಡರ್ ಬೆಲೆ ರೂ.50 ಹೆಚ್ಚಿಸಿದ ಕೇಂದ್ರ ಸರ್ಕಾರದ ಹೇರಿಕೆ ಕ್ರಮವನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ಕಟುವಾಗಿ ಟೀಕಿಸಿರುವ ಸಮಾಜವಾದಿ ಚಿಂತಕ ವೀರಭದ್ರಪ್ಪ, ಕಳೆದ ಹನ್ನೆರಡು ತಿಂಗಳಲ್ಲಿ ಆರನೇ ಬಾರಿಗೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಬಜೆಟಿನಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ.75 ರಷ್ಟು ಕಡಿತ ಮಾಡಿದ್ದರಿಂದ ಜನಸಾಮಾನ್ಯರ ಮೇಲೆ ನಿರೀಕ್ಷಿತ ದರ ಏರಿಕೆಯ ಹೊರೆ ಬಿದ್ದಿದೆ. ಆದರೆ ಜಾಗತಿಕವಾಗಿ ಕಚ್ಚಾತೈಲದ ದರ ಇಳಿಕೆಯಾಗಿದೆ. ಅಲ್ಲದೆ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಆಮದು ಮಾಡುವ ಪ್ರಮಾಣವು ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ ಎಂದಿದ್ದಾರೆ.

ಉಜ್ವಲ ಯೋಜನೆಯಡಿ ಬಡವರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಬಡವರ ಕಣ್ಣೀರಿಗೆ ಕಾರಣವಾಗಿದ್ದಾರೆ. ಈ ಉಜ್ವಲ ಫಲಾನುಭವಿಗಳೂ ಕೂಡ ಮಾರುಕಟ್ಟೆಯಲ್ಲಿ ಇದೇ ದರ ನೀಡಿ ಖರೀದಿಸಬೇಕಾದ ಅನಿವಾರ್ಯ ಪ್ರಸಂಗ ಸೃಷ್ಠಿಸಿ ಬಡ ಜನರಿಗೆ ದೋಃಖಾ ಮಾಡಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‍ಗಳ ಬೆಲೆಯನ್ನೂ ಕೂಡ ರೂ.352ರಷ್ಟು ತೀವ್ರವಾಗಿ ಏರಿಕೆ ಮಾಡಲಾಗಿದೆ. ಪರಿಣಾಮ ಈ ಹೋಟೆಲ್ ಮಾಲೀಕರು, ಗ್ಯಾಸ್ ಬೆಲೆ ಏರಿಕೆಯ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕುತ್ತಾರೆ. ಇದರಿಂದ ಪರೋಕ್ಷ ತೆರಿಗೆಗಳ ಮೂಲಕ ಮತ್ತೆ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಬಿಸಿ ಎಲ್ಲಾ ವರ್ಗದ ಜನರನ್ನು ತಟ್ಟುತ್ತದೆ. ಆದರೆ ಅತಿ ಶ್ರೀಮಂತರು ಕಡಿಮೆ ಆದಾಯ ತೆರಿಗೆಯ ಸುಃಖವನ್ನು ಅನುಭವಿಸುತ್ತಾ, ತಮ್ಮ ಸಂಪತ್ತನ್ನು ಹಿಗ್ಗಿಸಿಕೊಳ್ಳುತ್ತಾರೆ. ಜನಸಾಮಾನ್ಯರು ಬಳಸುವ ಈ ಅಡುಗೆ ಅನಿಲ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮ ಜನವಿರೋಧಿಯಾಗಿದ್ದು, ಇದರ ವಿರುದ್ಧ ಹೋರಾಡಲು ಜನತೆ ಸಂಘಟಿತರಾಗಬೇಕು ಎಂದು ಕಾಮ್ರೇಡ್ ವೀರಭದ್ರಪ್ಪ ಕರೆ ನೀಡಿದ್ದಾರೆ.