ಉಚಿತ ಆಹಾರ ಒದಗಿಸಲು ಒತ್ತಾಯ

ಬ್ಯಾಡಗಿ,ಮೇ13: ಪೌರಾಡಳಿತ ಇಲಾಖೆಯ ಆದೇಶದಂತೆ ನಿರ್ಗತಿಕರು, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಊಟೋಪಚಾರವನ್ನು ಪಟ್ಟಣದ ಸಮುದಾಯ ಭವನಗಳಲ್ಲಿ ಒದಗಿಸುವಂತೆ ತಾಲೂಕಾ ಕಾಂಗ್ರೇಸ್ ಕಾರ್ಯಕರ್ತರು ಬುಧವಾರ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಸ್ಥಳೀಯ ತಾಲೂಕಾ ಕಚೇರಿಯ ಮುಂದೆ ತಹಶೀಲ್ದಾರ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಕಾಂಗ್ರೇಸ್ ಮುಖಂಡ ಪ್ರಕಾಶ ಬನ್ನಿಹಟ್ಟಿ, ಕೋವಿಡ್ ಹಿನ್ನಲೆಯಲ್ಲಿ ಪೌರಾಡಳಿತ ಇಲಾಖೆಯು ಎಲ್ಲಾ ತಾಲೂಕ ಕೇಂದ್ರಗಳಲ್ಲಿ ನಿರ್ಗತಿಕರಿಗೆ, ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಊಟೋಪಚಾರ ವ್ಯವಸ್ಥೆ ಮಾಡುವಂತೆ ಆದೇಶಿಸಿದೆ. ಆದರೆ ಬ್ಯಾಡಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲದಿರುವುದರಿಂದ ತಾಲೂಕಾ ಆಡಳಿತ ಸಮುದಾಯ ಭವನಗಳಲ್ಲಿ ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಮಂಜುನಾಥ ಭೋವಿ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯೂನಸ್ ಅಹ್ಮದ್ ಸವಣೂರು, ಶಹರ ಘಟಕದ ಅಧ್ಯಕ್ಷ ರಮೇಶ ಮೋಟೆಬೆನ್ನೂರ, ಉದಯ ಚೌಧರಿ, ಶಫೀ ಮುಲ್ಲಾ, ನವೀದ್ ಶಿಡೇನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.