ಬೀದರಃನ.16: ಬಡ ರೋಗಿಗಳಿಗೆ ಉತ್ತಮ ರೀತಿಯ ವೈದ್ಯಕೀಯ ತಪಾಸಣೆ ಮಾಡಿ, ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಕಂಡುಹಿಡಿದು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಮಾಡಿಕೊಂಡಾಗ ಆರೋಗ್ಯವಂತರಾಗಿ ಬಾಳಿ ಬದುಕಬಹುದಾಗಿದೆ ಎಂದು ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷರಾದ ಅಂಕೂರ ಸಲಾದಪೂರಕರ್ ರವರು ಹೇಳಿದರು.
ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಬೀದರ ತಾಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಉಚಿತ ಆರೊಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿದ ಅವರು, ಶಿಬಿರದಲ್ಲಿ ಭಾಗವಹಿಸಿದ ಅನೇಕ ಬಡ ರೋಗಿಗಳಿಗೆ ವೈದ್ಯರುಗಳು ಉತ್ತಮವಾಗಿ ಸ್ಪಂದಿಸಿ ವೈದ್ಯಕೀಯ ತಪಾಸಣೆ ನೀಡಿದರು. ಶಿಬಿರದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರು ಭಾಗವಹಿಸಿದರು.
ಬಡವರ ಪಾಲಿಗೆ ಉತ್ತಮ ವೈದ್ಯರಾಗಿ ಸೇವೆ ಸಲ್ಲಿಸಿದ ದಿವಂಗತ ಮಾರುತಿರಾವ ಚಂದನಹಳ್ಳಿ (ಕಂಪೌಂಡರ್) ಅವರ ಮೊಮ್ಮಗ ಅಂಕುರ ಅವರು ಕೂಡ ಅವರ ತಾತನಂತೆ ಸಮಾಜದಲ್ಲಿ ಉತ್ತಮ ರೀತಿಯಿಂದ ಸಾಧನೆ ಮಾಡಿ ಬಡ ರೋಗಿಗಳ ಬಾಳಿಗೆ ಬೆಳಕಾಗಲಿ ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರು ಆಶಯ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಪಾಲ್ಗೊಂಡಿರುವ ಜನರಿಗೆ ಡಾ|| ಫರಹಾನ, ಡಾ|| ಅಬ್ದುಲ್ಲಾ, ಡಾ|| ಆಕಾಶ, ಡಾ|| ತರಣಮ್ ವೈದ್ಯರುಗಳು ವೈದ್ಯಕೀಯ ತಪಾಸಣೆ ಕೈಗೊಂಡರು. ಈ ಸಂದರ್ಭದಲ್ಲಿ ಮಾರುತಿ ಹೆಲ್ತ್ ಕೇರ್ ಸೆಂಟರ್‍ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.