
ಕೆಂಗೇರಿ,ಆ.೪-ಜಯಮ್ಮ ದಾಸೇಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಸಿ ವಿತರಣಾ ಕಾರ್ಯಕ್ರಮ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ. ಶಿವರಾಜ್ ಗೌಡ ಹಾಗೂ ಅವರ ತಂಡದ ವತಿಯಿಂದ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಹೆಚ್.ಡಿ. ಬೆಟ್ಟೇಗೌಡ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸ್ವಾಮಿಗೌಡ ನೆರೆದಿದ್ದ ಜನರಿಗೆ ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಶಿವರಾಜ್ ಗೌಡ ಕಾಯಿಲೆ ಎಂಬುದು ಮನುಷ್ಯನಲ್ಲಿ ಪರಿಣಾಮಕಾರಿಯಾಗಿ ಬೆಳೆದು ಮಾನಸಿಕವಾಗಿ ಕುಬ್ಜನನ್ನಾಗಿ ಮಾಡಿ ಕೊನೆಗೆ ಸಾವಿನ ಸುಳಿಯಲ್ಲಿ ಸಿಲುಕಿಸುತ್ತದೆ, ಅದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಮನುಷ್ಯ ಆರೋಗ್ಯವಂತವನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.
ಪೊಲೀಸ್ ಇಲಾಖೆಯ ಒತ್ತಡದ ಕೆಲಸದ ನಡುವೆಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ೪೦ ವರ್ಷ ಮೀರಿದ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ನಂತರ ಬೆಟ್ಟೇಗೌಡರವರು ಮಾತನಾಡಿ ಸುಮಾರು ೨೦ ವರ್ಷಗಳಿಂದ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಟ್ರಸ್ಟ್ ವತಿಯಿಂದ ಮಾಡಿಕೊಂಡು ಬರುತ್ತಿದ್ದೇವೆ. ಹಾಗೆಯೇ ಈ ವರ್ಷವೂ ಬ್ಯಾಡರಹಳ್ಳಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದೇವೆ. ಬಡವರಿಗೆ ವೈದ್ಯಕೀಯ ಪರಿಹಾರವನ್ನು ನೀಡುವುದು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಟ್ರಸ್ಟಿನ ಉದ್ದೇಶವಾಗಿದೆ ಎಂದರು