ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೋಲಾರ,ಡಿ,೨೮- ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶದ ಜನತೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು, ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಪ್ಪ ಕರೆ ನೀಡಿದರು.
ತಾಲ್ಲೂಕಿನ ತೊಟ್ಲಿ ಗ್ರಾ.ಪಂ ವ್ಯಾಪ್ತಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಜಾಲಪ್ಪ ಆಸ್ಪತ್ರೆ ಹಾಗೂ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಆಶ್ರನಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಅನೇಕ ಮಂದಿಯ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡುತ್ತಿದ್ದರು.
ಬದಲಾದ ಆಹಾರ ಪದ್ದತಿಯಿಂದಾಗಿ ಇಂದು ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಾಮಾನ್ಯವಾಗುತ್ತಿದೆ, ಇದರಿಂದ ಪಾರಾಗಲು ನಿಯಮಿತ ವ್ಯಾಯಾಮ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅತ್ಯಗತ್ಯ ಎಂದ ಅವರು, ಸಕ್ಕರೆ ಕಾಯಿಲೆಯಿಂದಾಗುವ ಹಾನಿ ತಡೆಗೆ ೫೦ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಗಾಗ್ಗೆ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದರು.
ಈ ಶಿಬಿರದಲ್ಲಿ ಸುಮಾರು ೧೪೦ ಜನ ತಮ್ಮ ಆರೋಗ್ಯ ಪರೀಕ್ಷಿಸಿಕೊಂಡರು. ಈ ಶಿಬಿರದಲ್ಲಿ ಪಾಲ್ಗೊಂಡ ಸುಮಾರು ೨೬ ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಲಾಯಿತು.
ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನ ಸಮುದಾಯ ಪ್ರಾಧ್ಯಾಪಕರಾದ ಡಾಕ್ಟರ್ ಪ್ರಸನ್ನ ಕಾಮತ್ ಹಾಗೂ ಡಾಕ್ಟರ್ ಸುನಿಲ್ ಮಾತನಾಡಿ, eಆಸ್ಪತ್ರೆಯಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿದ್ದು, ಇದರ ಪ್ರಯೋಜನ ಪಡೆಯಿರಿ ಎಂದರು.
ಈ ಸಂದರ್ಭದಲ್ಲಿ ಉಚಿತವಾಗಿ ರಕ್ತ,ಮೂತ್ರ ಪರೀಕ್ಷೆ, ಇಸಿಜಿ, ಕಣ್ಣಿನ ಪರೀಕ್ಷೆ, ಮಕ್ಕಳ ತಜ್ಞರು,ಮೂಳೆ,ಕೀಲು ತಜ್ಞರು, ಚರ್ಮರೋಗ ತಜ್ಞರಿಂದ ಚಿಕಿತ್ಸೆ ಕೊಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊಟ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿತಾ, ಗ್ರಾ.ಪಂ ಉಪಾಧ್ಯಕ್ಷೆ ಅನಿತಾ ಚೌಡರೆಡ್ಡಿ ಗ್ರಾಮದ ಮುಖಂಡರಾದ ಸಿ.ಎಲ್. ಪುರುಷೋತ್ತಮ ಸಿ.ಬಿ. ಆನಂದ್,ಶಿಕ್ಷಕ ಸಿ.ಬಿ.ನಾರಾಯಣಸ್ವಾಮಿ, ದಿನ್ನುರಿನ ಮುನಿರಾಜು ಮತ್ತಿತರರು ಹಾಜರಿದ್ದರು.