ಉಚಿತ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಬಸ್ ಸೇವೆಗೆ ಚಾಲನೆ

ಚಾಮರಾಜನಗರ, ಮೇ. 28- ಬೆಂಗಳೂರಿನ ಲಯನ್ಸ್ ಕ್ಲಬ್, ಫ್ಯಾಮಿಲಿ ಆಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್ ಸೋಂಕಿತರಿಗಾಗಿ ನೀಡಲಾಗುತ್ತಿರುವ ಉಚಿತ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಬಸ್ ಸೇವೆಗೆ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಚಾಲನೆ ನೀಡಿದರು.
ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲಿ ಆಕ್ಸಿಜನ್ ಸೌಲಭ್ಯ ಅಳವಡಿಕೆಯ ಬಸ್ ಸೇವೆಗೆ ಇಂದು ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಳೆದ ಮೇ 2 ರಂದು ಆಕ್ಸಿಜನ್ ಕೊರತೆಯಿಂದ ಅನೇಕ ರೋಗಿಗಳು ಮೃತಪಟ್ಟ ದುರಂತದ ನಂತರ ಎಚ್ಚೆತ್ತ ಸರ್ಕಾರ ದಾನಿಗಳ ಮೂಲಕ ಜಿಲ್ಲೆಯ ಜನತೆಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಚಾರಿ ಆಕ್ಸಿಜನ್ ಬಸ್ ಸೌಲಭ್ಯ ಕಲ್ಪಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ರಾಜ್ಯ ವಿಶೇಷ ಚೇತನರ ಆಯೋಗದ ಮಾಜಿ ಆಯುಕ್ತರಾದ ಕೆ.ವಿ. ರಾಜಣ್ಣ, ಸಮರ್ಥನಂ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಸಂಸ್ಥಾಪಕ ಮ್ಯಾನೆಜಿಂಗ್ ಟ್ರಸ್ಟಿ ಜಿ,ಕೆ. ಮಹಾಂತೇಶ್, ಫ್ಯಾಮಿಲಿ ಮತ್ತು ಫ್ರೆಂಡ್ಸ್ ಆಫ್ ಇಂಡಿಯಾದ ಸಂಸ್ಥಾಪಕರಾದ ಬರ್ಕಿ ಗಾಯತ್ರಿ ಪ್ರಕಾಶ್, ಕೆ.ಎನ್. ಶಿವಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.