ಉಗ್ರ ಹಫೀಜ್ ಸಯೀದ್ ಗೆ 10 ವರ್ಷ ಜೈಲು

ಲಾಹೋರ್,(ಪಾಕಿಸ್ತಾನ) ನ.೧೯- ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸ್ಪೋಟದ ಮಾಸ್ಟರ್ ಮೈಂಡ್ ಹಾಗು ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಹತ್ತು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ೧೧ ವರ್ಷ ಜೈಲು ಶಿಕ್ಷೆ ಎದುರಿಸುತ್ತಿದ್ದು, ಕಳೆದ ಫೆಬ್ರವರಿಯಿಂದ ಜೈಲಿನಲ್ಲಿರುವ ಹಫೀಜ್ ಗೆ ಮತ್ತೆ ಬೇರೆ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಹೋರ್ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
೨೬/೧೧ ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗು ಜಾಗತಿಕ ಉಗ್ರ ಎನ್ನುವ ಹಣೆ ಪಟ್ಟಿಕಟ್ಟಿಕೊಂಡಿರುವ ಹಫೀಜ್ ಸಯೀದ್‌ಗೆ ಲಾಹೋರ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸದ್ಯ ಅತಿ ಭದ್ರತೆ ಇರುವ ಕೋಟ್ ಲಾಕ್ ಪರ್ ಜೈಲಿನಲ್ಲಿ ಇರಿಸಲಾಗಿದೆ.
ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಹೋರ್ ನ್ಯಾಯಾಲಯ ಹಫೀಜ್ ಸಯೀದ್ ಮತ್ತು ಆತನ ಇಬ್ಬರು ಸಹಚರರಾದ ಜಾಫರ್ ಇಕ್ಬಾಲ್ ಮತ್ತು ಯಹ್ಯಾ ಮುಜಾಯಿದ್ದೀನ್ ಅವರಿಗೂ ಕೂಡ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ನಡುವೆ ಹಫೀಜ್ ಸಯೀದ್ ಬಾವಮೈದುನ ಅಬ್ದುಲ್ ರೆಹಮಾನ್ ಮಕ್ಕಿಗೂ ಕೂಡ ೬ ತಿಂಗಳು ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಹರ್ಷದ್ ಹುಸೈನ್ ಬುಟ್ಟಾ ಆದೇಶಿಸಿದ್ದಾರೆ.
ಜಮಾತ್ ಉದ್ ದವಾ ಮುಖಂಡರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ೪೧ ಗಂಭೀರ ಪ್ರಕರಣಗಳು ದಾಖಲಾಗಿವೆ.ಅದರಲ್ಲಿ ೨೪ ಭಯೋತ್ಪಾಧನಾ ನಿಗ್ರಹ ನ್ಯಾಯಾಲಯದಲ್ಲಿ ಬಾಕಿ ಇವೆ.
೨೦೦೮ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ೧೬೬ ಮಂದಿ ಮೃತಪಟ್ಟಿದ್ದರು.ಅದರಲ್ಲಿ ೬ ಮಂದಿ ಅಮೇರಿಕಾದ ಪ್ರಜೆಗಳೂ ಇದ್ದರು.೨೦೧೮ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಗ್ರ ಹಫೀಜ್ ಸಯೀದ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿತ್ತು.