ಉಗ್ರ ಹಫೀಜ್‌ಗೆ ೩೨ ವರ್ಷ ಕಾರಾಗೃಹ ಶಿಕ್ಷೆ

ಲಾಹೋರ್,ನ.೧೨- ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪ ಸಾಬೀತಾದ ಹಿನ್ನೆಲೆ ಉಗ್ರ ಹಫೀಜ್ ಸೈಯದ್‌ನಿಗೆ ಎಟಿಸಿ ನ್ಯಾಯಾಲಯ ೩೨ ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ಜಮಾತ್-ಉದ್-ದವಾಹ್ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ್ದನ್ನು ವಿಚಾರಣೆ ನಡೆಸಿದ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ೩೨ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಸೋದರಮಾವ ಸೇರಿದಂತೆ ಇನ್ನೆರೆಡು ಜಮಾತ್-ಉದ್-ದವಾಹ್ ಉಗ್ರಗಾಮಿ ಸಂಘಟನೆ ನಾಯಕರನ್ನೂ ಶಿಕ್ಷೆಗೊಳಪಡಿಸಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರೊ. ಜಾಫರ್ ಇಕ್ಬಾಲ್ ಮತ್ತು ಪ್ರೊ. ಹಫೀಜ್ ಅಬ್ದುಲ್ ರೆಹಮಾನ್ ಮಕ್ಕೀ ಅವರಿಗೆ ೧೬ ವರ್ಷ ಹಾಗೂ ಮತ್ತೊಂದು ಪ್ರಕರಣದಲ್ಲಿ ೧ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ಇನ್ನಿಬ್ಬರು ಉಗ್ರ ಸಂಘಟನೆ ಸದಸ್ಯರಾದ ಅಬ್ದುಲ್ ಸಲಾಂ ಬಿನ್ ಮಹಮದ್ ಮತ್ತು ಲುಕ್ಮಾನ್ ಷಾಗೆ ಭಯೋತ್ಪಾದಕ ಕೆಲಸಗಳಿಗ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣ ಪಟ್ಟಿ ಸಿದ್ಧಪಡಿಸಲಾಗಿದೆ.
ನ. ೧೬ ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಹಾಜರುಪಡಿಸಲು ಸಾರ್ವಜನಿಕ ಅಭಿಯೋಜಕರಿಗೆ ನಿರ್ದೇಶನ ನೀಡಲಾಗಿದೆ.
ಪಾಕ್‌ನ ಬೇರೆ ಬೇರೆ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗೆ ಹಣಕಾಸು ಒದಗಿಸಿದ ಆರೋಪದಡಿ ಸೈಯದ್ ಮತ್ತು ಸಹಚರರ ವಿರುದ್ಧ ಪಂಜಾಬ್ ಪೊಲೀಸರು ಒಟ್ಟು ೨೩ ಪ್ರಕರಣಗಳನ್ನು ದಾಖಲಿಸಿದೆ.