ಉಗ್ರ ಶಾರೀಕ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

ಮಂಗಳೂರು,ನ.೨೫- ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಉಗ್ರ ಶಾರೀಕ್ ಗೆ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಉಗ್ರ ಶಾರೀಕ್ ಆರೋಗ್ಯದ ಬಗ್ಗೆ ಎಂಟು ಮಂದಿ ವೈದ್ಯರು ದಿನದ ೨೪ ತಾಸು ನಿಗಾ ವಹಿಸುತ್ತಿದ್ದು ಅಗತ್ಯವರುವ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ.ದಿನದಿಂದ ದಿನಕ್ಕೆ ಶಾರೀಕ್ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದೆ. ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಭಾರೀ ಪ್ರಮಾಣದ ಹೊಗೆ ಕಂಡುಬಂದಿತ್ತು. ಸ್ಪೋಟದ ಹೊಗೆ ಶಾರೀಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ.
ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. ೮ ಮಂದಿ ವೈದ್ಯರಿಂದ ದಿನದ ೨೪ ತಾಸು ನಿಗಾ ವಹಿಸಲಾಗುತ್ತಿದೆ. ಶಾರೀಕ್ ಎಳೆಯ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿದೆ.
ಕದ್ರಿ ದೇವಸ್ಥಾನದ ದೂರು:
ಈ ನಡುವೆ ಆಟೋ ರಿಕ್ಷಾ ಬಾಂಬ್ ಸ್ಪೋಟ ದಲ್ಲಿ ಕದ್ರಿ ದೇವಸ್ಥಾನ ಟಾರ್ಗೆಟ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕದ್ರಿ ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಾಮಾಜಿಕ ಜಾಲತಾಣ ದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್ ಸಿ) ಕದ್ರಿ ದೇವಸ್ಥಾನದ ಮೇಲೆ ಬಾಂಬ್ ಬೆದರಿಕೆ ಹಾಕಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ. ಅಲ್ಲದೇ ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಕಾರ್ಯ ನಿರ್ವಾಹಣಾಧಿಕಾರಿ ಜಯಮ್ಮ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲು:
ಜಯಮ್ಮ ದೂರನ್ನು ಕದ್ರಿ ಠಾಣೆ ಪೊಲೀಸರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದು ಕದ್ರಿ ದೇವಸ್ಥಾನ ಅಂತ ಪೋಸ್ಟ್ ಮಾಡಿತ್ತು. ಅರೇಬಿಕ್ ಭಾಷೆಯಲ್ಲಿ ಬರೆದುಕೊಂಡು ತಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು ಎಂದು ಉಗ್ರರು ಹೇಳಿರುವುದರಿಂದ ಈ ದೂರು ನೀಡಲಾಗಿದೆ