
ಬೆಂಗಳೂರು,ಮಾ.೭- ಮಂಗಳೂರು ಆಟೋ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್‌ನನ್ನು ಇದೇ ಮಾ. ೧೫ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳ ಕಸ್ಟಡಿಗೆ ನೀಡಲಾಗಿದ್ದು ವಿಚಾರಣೆ ತೀವ್ರಗೊಳಿಸಲಾಗಿದೆ.
ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಶಂಕಿತ ಉಗ್ರ ಶಾರಿಕ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಎರಡೂವರೆ ತಿಂಗಳ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಆತನನ್ನು ನಿನ್ನೆ ಡಿಸ್ಚಾರ್ಜ್ ಮಾಡಲಾಗಿತ್ತು.
ಡಿಸ್ಚಾರ್ಜ್ ಮಾಡಲಾಗಿದ್ದ ಶಾರಿಕ್ ನನ್ನು ನಗರದ ವಿಶೇಷ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಿದ್ದು ಆತನನ್ನು ೧೦ ದಿನಗಳ ಎನ್‌ಐಎ ಕಸ್ಟಡಿಗೆ ನೀಡಿದೆ.ಕಳೆದ ೨೦೨೨ರ ನವೆಂಬರ್ ೧೯ರಂದು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡು ಶಾರಿಕ್ ಗಾಯಗೊಂಡಿದ್ದನು. ಆತನೊಂದಿಗೆ ಆಟೋ ರಿಕ್ಷಾ ಚಾಲಕನೂ ಗಾಯಗೊಂಡಿದ್ದು, ಆರೋಪಿಗೆ ಶೇ ೪೦ರಷ್ಟು ಸುಟ್ಟ ಗಾಯಗಳಾಗಿತ್ತು.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಾರಿಕ್, ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಿತನಾಗಿದ್ದನು ಮತ್ತು ಶಿವಮೊಗ್ಗ ಪಟ್ಟಣದಲ್ಲಿ ಇದೇ ರೀತಿಯ ಐಎಸ್ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದ್ದನು ಎನ್ನಲಾಗಿದೆ.
ಈ ಮಧ್ಯೆ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್ ಐಎಸ್ ಉಗ್ರ ಸಂಘಟನೆ ಕೊನೆಗೂ ಸ್ಫೋಟದ ಹೊಣೆ ಹೊತ್ತಿದೆ.ಐಸಿಸ್ ಸಂಘಟನೆಯ ವಕ್ತಾರ ಐಎಸ್‌ಕೆಪಿ (ಇಸ್ಲಾಮಿಕ್ ಸ್ಟೇಟ್ಸ್ ಕೊರಸನ್ ಪ್ರಾವಿನ್ಸ್) ನಡೆಸುವ ವಾಯ್ಸ್ ಆಫ್ ಕೂರಸ ನಿಯತಕಾಲಿಕೆಯಲ್ಲಿ ಕರ್ನಾಟಕದ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಹೊಣೆ ಹೊತ್ತಿರುವ ಕುರಿತಾಗಿ ಪ್ರಕಟಿಸಲಾಗಿದೆ.