ನಗರದಲ್ಲಿ ೧೨ ಕಡೆ ಎನ್‌ಐಎ ದಾಳಿ

ಸಂಜೆವಾಣಿ ಪ್ರತಿನಿಧಿಯಿಂದ

ಬೆಂಗಳೂರು,ಡಿ.೧೩- ದೇಶದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿರುವ ಶಂಕಿತ ಉಗ್ರರ ವಿರುದ್ಧದ ಸಮರ ಸಾರಿರುವ ರಾಷ್ಟ್ರೀಯ ತನಿಖಾ ದಳ( ಎನ್‌ಐಎ)ಅಧಿಕಾರಿಗಳು ಇಂದು ಮುಂಜಾನೆ ನಗರದ ೧೨ ಕಡೆಗಳಲ್ಲಿ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.
ಇತ್ತೀಚೆಗೆ ಶಂಕಿತ ಉಗ್ರ ಅಲಿ ಅಬ್ಬಾಸ್‌ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದು ಆತ ನೀಡಿದ ಮಾಹಿತಿ ಹಾಗೂ ಶಂಕಿತ ಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ಎನ್‌ಐಎ ಅಧಿಕಾರಿಗಳು ೧೨ ಕಡೆಗಳಲ್ಲಿ ದಾಳಿಯನ್ನು ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಮುಂಬೈ ಮೂಲದ ಅಲಿ ಅಬ್ಬಾಸ್, ನಾಲ್ಕು ವರ್ಷದ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದ ಪತ್ನಿ ಹಾಗೂ ಮೂವರು ಮಕ್ಕಳು ಸಮೇತ ಪುಲಿಕೇಶಿನಗರದ ಮೋರ್ ರಸ್ತೆಯ ಬಿಲ್ಡಿಂಗ್‌ವೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದನು. ಅಲಿ ಅಬ್ಬಾಸ್ ಡಾಟಾ ಕನ್ಸಲ್‌ಟೆಂಟ್ ಆಗಿ ಒಂದು ವರ್ಷದಿಂದ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಕೊರೊನಾ ಸಂದರ್ಭದಲ್ಲಿ ಅಲಿ ಅಬ್ಬಾಸ್ ಕೆಲಸ ಬಿಟ್ಟಿದ್ದನು. ಪತ್ನಿ ನ್ಯೂಟ್ರಿ ಕೇರ್ ಆಸ್ಪತ್ರೆ ನಡೆಸುತ್ತಿದ್ದರು.ಶಂಕಿತ ಉಗ್ರ ಅಲಿ ಅಬ್ಬಾಸ್ ಐಸಿಸ್ ಜೊತೆ ನಂಟು ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಡಿಸೆಂಬರ್ ೯ರ ನಸುಕಿನ ಜಾವ ೫:೩೦ ಸುಮಾರಿಗೆ ಶಂಕಿತ ಉಗ್ರನ ಮನೆ ಮೇಲೆ ದಾಳಿದ್ದರು. ಶಂಕಿತ ಉಗ್ರ ಅಲಿ ಅಬ್ಬಾಸ್ ನಗರದಲ್ಲಿ ಉರ್ದು ಶಾಲೆ ನಡೆಸುತ್ತಿದ್ದನು. ಶಂಕಿತ ಉಗ್ರನಿಂದ ಅಧಿಕಾರಿಗಳು ೧೬ ಲಕ್ಷ ೪೨ ಸಾವಿರ ನಗದು ಜಪ್ತಿ ಮಾಡಿಕೊಂಡಿದ್ದರು.ಹಿಂದೆ ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಆರ್‌ಟಿ ನಗರದ ಮನೆಯೊಂದರಲ್ಲಿ ಗ್ರೆನೇಡ್ ಹಾಗು ಪಿಸ್ತೂಲ್ ಸಿಕ್ಕಿತ್ತು. ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿದ್ದು, ತನಿಖಾ ಸಂಸ್ಥೆ ತೀವ್ರವಾಗಿ ತನಿಖೆ ನಡೆಸುತ್ತಿದೆ.ಬಂಧಿತ ಶಂಕಿತ ಉಗ್ರ ಈ ವಿಚಾರದಲ್ಲಿ ಹಲವು ಮಾಹಿತಿ ನೀಡಿದ್ದು, ಆತನಿಂದ ಪಡೆದ ಮಾಹಿತಿಯಂತೆ ದಾಳಿ ನಡೆಸಲಾಗಿದೆ.
ನಗರದಲ್ಲಿ ಬಂಧನವಾಗಿದ್ದ ಐವರು ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ದಾಳಿಗಳು ನಡೆದಿವೆ. ಮುದಾಸಿರ್, ಜಾಹಿದ್, ತಬ್ರೇಜ್ ಮಹಮದ್ ಉಮರ್ ಸೇರಿ ೫ ಜನರನ್ನು ಬಂಧಿಸಲಾಗಿತ್ತು.ಹೆಬ್ಬಾಳ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಮೊದಲು ಸಿಸಿಬಿ ಅಧಿಕಾರಿಗಳು ಜುಲೈ ೧ರಂದು ದಾಳಿ ಮಾಡಿದ್ದರು. ಈ ವೇಳೆ ೭ ನಾಡ ಪಿಸ್ತೂಲ್, ೪೫ ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ಈ ಪ್ರಕರಣ ಇತ್ತೀಚೆಗಷ್ಟೇ ಎನ್‌ಐಎಗೆ ವರ್ಗಾವಣೆ ಆಗಿತ್ತು.
ವಿಚಾರಣೆಯ ವೇಳೆ ವಿದೇಶದಿಂದ ಜುನೈದ್ ಎಂಬ ಉಗ್ರ ಆಪರೇಟ್ ಮಾಡುತ್ತಾ ಇದ್ದದ್ದು ಬೆಳಕಿಗೆ ಬಂದಿತ್ತು. ಜೊತೆಗೆ ಸರಣಿ ಬಾಂಬ್ ಬ್ಲಾಸ್ಟ್ ರೂವಾರಿ ನಾಸೀರ್ ಜೈಲಿನಲ್ಲಿ ಈ ಶಂಕಿತರಿಗೆ ಭಯೋತ್ಪಾದಕ ಕೃತ್ಯಗಳ ತರಬೇತಿ ನೀಡಿದ್ದ ಎಂಬುದು ತಿಳಿದುಬಂದಿತ್ತು.
ಈ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ಐಎ ಇಂದು ನಡೆಸಿರುವ ದಾಳಿಯಲ್ಲಿ ಆರು ಕಡೆ ಮನೆಗಳ ಪರಿಶೀಲನೆ ಮಾಡಿದೆ. ದಾಳಿಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗುವ ಸಾಧ್ಯತೆಗಳಿವೆ.