ಉಗ್ರರ ದಾಳಿ ಮುಖಕ್ಕೆ ರಕ್ತ ಮೆತ್ತಿಸಿ ವಿದ್ಯಾರ್ಥಿ ಪಾರು

ಎಂಪೊಂಡ್ವೆ (ಉಗಾಂಡಾ), ಜೂ.೨೦- ಕೆಲದಿನಗಳ ಹಿಂದೆ ಪಶ್ಚಿಮ ಉಗಾಂಡಾದ ಎಂಪೊಂಡ್ವೆಯ ಲುಬಿರಿಹಾ ಮಾಧ್ಯಮಿಕ ಶಾಲೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ನಂಟು ಹೊಂದಿರುವ ಬಂಡುಕೋರರಿಂದ ನಡೆದ ದಾಳಿಯಲ್ಲಿ ೩೮ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ೪೧ ಜನರು ಸಾವನ್ನಪ್ಪಿರುವ ಘಟನೆ ಇನ್ನೂ ಮಾಸಿಲ್ಲ. ಅದರಲ್ಲೂ ಮಕ್ಕಳ ಮೇಲೆ ಇನ್ನೂ ಇದರ ಭಯದ ಛಾಯೆ ಆವರಿಸಿದೆ. ಘಟನೆಯಲ್ಲಿ ಬದುಕುಳಿಯಲು ಕೆಲವು ಮಕ್ಕಳು ರಕ್ತವನ್ನೇ ತಮ್ಮ ಮುಖಕ್ಕೆ ಮೆತ್ತಿಸಿ ಅಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೂಲಿಯಸ್ ಇಸಿಂಗೋಮಾ ಎಂಬಾ ವಿದ್ಯಾರ್ಥಿಯೊಬ್ಬ ತನ್ನ ಶಾಲಾ ವಸತಿ ನಿಲಯದ ಮೇಲೆ ಶಂಕಿತ ಇಸ್ಲಾಮಿಸ್ಟ್ ಬಂಡುಕೋರರಿಂದ ನಡೆದ ರಾತ್ರಿಯ ದಾಳಿಯಿಂದ ಹೇಗೆ ಅದ್ಭುತವಾಗಿ ಬದುಕುಳಿದೆ ಎಂಬ ಬಗ್ಗೆ ಮಾಧ್ಯಮವೊಂದಕ್ಕೆ ಸವಿವರವಾಗಿ ತಿಳಿಸಿದ್ದಾರೆ. ಜೂಲಿಯಸ್ ಸೇರಿದಂತೆ ಕೇವಲ ಆರು ಮಂದಿ ಮಾತ್ರ ಈ ಭಯಾನಕ ದಾಳಿಯಲ್ಲಿ ಬದುಕುಳಿದಿದ್ದರು. ಸದ್ಯ ಅಲ್ಪಸ್ವಲ್ಪ ಗಾಯಗಳೊಂದಿಗೆ ಕಸೆಸೆ ಜಿಲ್ಲೆಯ ಬ್ವೆರಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೂಲಿಯೆಸ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ನನ್ನ ಸಹೋದ್ಯೋಗಿಗಳ ರಕ್ತವನ್ನು ನಾನು ನನ್ನ ಬಾಯಿ, ಕಿವಿ ಮತ್ತು ನನ್ನ ತಲೆಯ ಮೇಲೆ ಹಚ್ಚಿಕೊಂಡಿದ್ದೆ. ಇದರಿಂದ ದಾಳಿಕೋರರು ನಾನು ಸತ್ತಿದ್ದೇನೆ ಎಂದು ಭಾವಿಸಿದ್ದರು. ಗನ್ ಹಿಡಿದು ಉಗ್ರರು ಬಾಲಕರ ವಸತಿ ನಿಲಯಕ್ಕೆ ಬಂದಾಗ ವಿದ್ಯಾರ್ಥಿಗಳು ಕೂಡಲೇ ಅಪಾಯವನ್ನು ಅರಿತು ಬಾಗಿಲು ಮುಚ್ಚಿ, ಬೀಗ ಹಾಗಿದ್ದರು. ಉಗ್ರರು ಬಾಗಿಲು ತೆರೆಯಲು ಸಾಧ್ಯವಾಗದಿದ್ದಾಗ ಅವರು ವಸತಿ ನಿಲಯದೊಳಗೆ ಬಾಂಬ್ ಎಸೆದು, ನಂತರ ಬಾಗಿಲು ಒಡೆಯಲು ಸುತ್ತಿಗೆ ಮತ್ತು ಕೊಡಲಿಗಳನ್ನು ಬಳಸಿದರು. ಆದರೂ ಒಳನುಗ್ಗಿದ ಉಗ್ರರು ಸಿಕ್ಕ ಸಿಕ್ಕ ಕಡೆಗಳಲ್ಲಿ ಗುಂಡು ಹೊಡೆದು ವಿದ್ಯಾರ್ಥಿಗಳನ್ನು ಕೊಂದು ಹಾಕಿದ್ದರು ಎಂದು ಜೂಲಿಯಸ್ ತಿಳಿಸಿದ್ದಾರೆ. ಅತ್ತ ಗಾಡ್ವಿನ್ ಮುಂಬೆರೆ ಕೂಡ ಇದೇ ರೀತಿಯ ಶಾಲೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾನೆ. ಹೀಗೆ ಜೂಲಿಯೆಸ್, ಗಾಡ್ವಿನ್ ಸೇರಿದಂತೆ ಆರು ಮಂದಿ ಘಟನೆಯಲ್ಲಿ ಉಪಾಯದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ. ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಜೊತೆ ನಂಟು ಹೊಂದಿರುವ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) – ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ಮೂಲದ ಉಗಾಂಡಾದ ಗುಂಪು ನಡೆಸಿದೆ. ದಾಳಿಯಲ್ಲಿ ಶಾಲೆಯ ವಿದ್ಯಾರ್ಥಿ ನಿಲಯವನ್ನು ಸುಟ್ಟು ಹಾಕಲಾಗಿದ್ದು, ಆಹಾರದ ಅಂಗಡಿಯನ್ನು ಲೂಟಿ ಮಾಡಲಾಗಿತ್ತು. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಉಗಾಂಡಾದ ಗಡಿಯಿಂದ ಎರಡು ಕಿಲೋಮೀಟರ್ (೧.೨೫ ಮೈಲಿ) ಗಿಂತ ಕಡಿಮೆ ಇರುವ ಶಾಲೆಯ ಮೇಲಿನ ದಾಳಿಯು ಉಗಾಂಡಾದ ಶಾಲೆಯ ಮೇಲೆ ಹಲವು ವರ್ಷಗಳಿಂದ ನಡೆದ ಮೊದಲ ದಾಳಿಯಾಗಿದೆ. ಅಲ್ಲದೆ ಕಳೆದ ಎರಡು ದಶಕಗಳಿಂದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಇದ್ದುಕೊಂಡೇ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಬಂಡುಕೋರರು ದುಷ್ಟ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ.