ಉಗ್ರರ ದಾಳಿಗೆ ವಿಶ್ವಸಂಸ್ಥೆ ಖಂಡನೆ

ಮೊಗದಿಶು (ಸೊಮಾಲಿಯಾ), ನ.೨೭- ಇಲ್ಲಿನ ಶಾಲೆಯ ಎದುರಲ್ಲಿ ವಿಶ್ವಸಂಸ್ಥೆಯ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಾವು ಶ್ರದ್ದಾಂಜಲಿ ಸಲ್ಲಿಸುತ್ತೇವೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ತಪ್ಪಿತಸ್ಥರ ವಿರುದ್ಧ ಸೋಮಾಲಿಯಾ ಸರ್ಕಾರ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರು ಸೋಮಾಲಿಯಾ ಸರ್ಕಾರ ಹಾಗೂ ಜನತೆಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ವಿಶ್ವಸಂಸ್ಥೆಯ ಉಪವಕ್ತಾರ ಫರ್ಹಾನ್ ಹಕ್ ತಿಳಿಸಿದ್ದಾರೆ. ಮೊಗದಿಶುವಿನ ಶಾಲೆಯೊಂದರ ಮುಂಭಾಗದಲ್ಲಿ ವಿಶ್ವಸಂಸ್ಥೆಯ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟು, ೧೭ ಮಂದಿ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಘಟನೆಯ ಹೊಣೆಯನ್ನು ಅಲ್ ಶಬಾಬ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.