ಉಗ್ರರ ಗುಂಪಿಗೆ ಸೇರಲು ಬಯಸಿದ್ದೆ

ಸ್ಫೋಟಕ ಹೇಳಿಕೆ

ಬೆಂಗಳೂರು,ಜು.೨೬-ಹಿಂದೂಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಇದರಿಂದ ನಮಗೆ ನೆಮ್ಮದಿ ಹಾಳಾಗಿದ್ದರಿಂದ ಉಗ್ರರ ಗುಂಪಿಗೆ ಸೇರಲು ಬಯಸಿದ್ದೆ ಎಂದು ತಿಲಕ್‌ನಗರದಲ್ಲಿ ಬಂಧಿತನಾಗಿರುವ ಆಲ್‌ಖೈದಾ ಶಂಕಿತ ಉಗ್ರ ಅಖ್ತರ್ ಹುಸೇನ್ ಆಘಾತಕಾರಿ ಅಂಶಗಳನ್ನು ಬಾಯಿಬಿಟ್ಟಿದ್ದಾನೆ.
ಸಿಸಿಬಿ ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಹುಸೇನ್ ಮೊಬೈಲ್‌ನಲ್ಲಿ ೨೦ ಜಿಬಿಯಷ್ಟು ಡೇಟಾ ಪತ್ತೆಯಾಗಿದ್ದು, ಆತ ಉಗ್ರ ಚಟುವಟಿಕೆಗಳ ಬಗ್ಗೆ ಚಾಟ್, ಪೋಸ್ಟ್‌ಗಳನ್ನು ಮಾಡಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮುಸ್ಲಿಂ ಸಮುದಾಯದ ಮೇಲೆ ಭಾರತದಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಪೋಸ್ಟ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಕಾಶ್ಮೀರ ಆಜಾದಿ ಹಾಗೂ ದೇಶ ವ್ಯಾಪ್ತಿ ಷರಿಯತ್ ಕಾನೂನು (ಮುಸ್ಲಿಂ ವೈಯಕ್ತಿಕ ಕಾನೂನು) ಜಾರಿಯಾಗಬೇಕು ಎಂದು ನಿರಂತರವಾಗಿ ಪೋಸ್ಟ್ ಹಾಕುತ್ತಿದ್ದ.ಈ ಪೋಸ್ಟ್‌ಗಳಿಂದ ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಆಲ್‌ಖೈದಾ ಸಂಘಟನೆಯ ಪ್ರಮುಖರು ಸಂಪರ್ಕ ಸಾಧಿಸಿದ್ದಾರೆ. ನಂತರ ಆತನಿಗೆ ಜಿಹಾದಿ ಬೋಧಿಸಿದ ಆಲ್‌ಖೈದಾ ಸಂಘಟನೆಯ ನೇಮಕಾತಿ ಜಾಲದ ಸದಸ್ಯರು, ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಆತಂಕವಿದೆ ಎ೦ದು ತಲೆ ಕೆಡಿಸಿದ್ದಾರೆ. ಉಗ್ರ ಸಂಘಟನೆಯ ಸಂಪರ್ಕವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರದ ಬಗ್ಗೆ ಮತ್ತಷ್ಟು ಪೋಸ್ಟ್‌ಗಳನ್ನು ಪ್ರಕಟಿಸುತ್ತಿದ್ದ.
ಮೊಬೈಲ್‌ಗಳನ್ನು ಈ ಕೃತ್ಯಕ್ಕೆ ಬಳಸಿದ್ದು, ಬೆಂಗಳೂರಿನ ಇಂಚಿಂಚೂ ಮಾಹಿತಿಯನ್ನು ಮೊಬೈಲ್‌ನಲ್ಲಿ ಇಟ್ಟಿದ್ದ. ಡೆಲಿವರಿ ಬಾಯ್ ಆಗಿದ್ದರಿಂದ ನಗರದ ಬಹುತೇಕ ಜಾಗಗಳನ್ನು ನೋಡಿದ್ದ. ಅವುಗಳ ಮ್ಯಾಪ್ ಕೂಡ ಸಿದ್ಧ ಮಾಡಿಕೊಂಡು, ಎಲ್ಲೆಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದು ಎನ್ನುವ ಬ್ಲೂ ಪ್ರಿಂಟ್ ನ್ನು ಕಾಶ್ಮೀರಕ್ಕೆ ಕಳಿಸಿಕೊಟ್ಟ ಬಗ್ಗೆ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಆ ಮೊಬೈಲ್‌ಗಳನ್ನು ರಿಟ್ರೀವ್‌ಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.
ಆರೋಗ್ಯ ಸಮಸ್ಯೆ:
ಅಸ್ಸಾಂ ಮೂಲದ ಶಂಕಿತ ಉಗ್ರ ಹುಸೇನ್ ಉದ್ಯೋಗಕ್ಕಾಗಿ ೨೦೧೫ರಲ್ಲಿ ನಗರಕ್ಕೆ ಬಂದು ಮೊದಲಿಗೆ ಕನಕಪುರ ರಸ್ತೆಯ ಮಯಾಸ್‌ನಲ್ಲಿ ಕೆಲಸಕ್ಕೆ ಸೇರಲು ಹೋದಾಗ ಕೇವಲ ೧೭ ವರ್ಷವಾಗಿದ್ದ ಕಾರಣ ಕೆಲಸ ಸಿಕ್ಕಿರಲಿಲ್ಲ. ಬಳಿಕ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ, ಅಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಕೆಲಸ ಬಿಟ್ಟಿದ್ದ
ಗಾರ್ಮೆಂಟ್ಸ್ ಒಂದರಲ್ಲಿ ೩ ತಿಂಗಳು ಕೆಲಸ ಮಾಡಿ ಅಲ್ಲಿ ಮಾರ್ಕ್ಸ್ ಕಾರ್ಡ್ ಕೇಳಿದ್ದಾರೆ ಎಂಬ ಕಾರಣಕ್ಕೆ ಪಿಯುಸಿ ಓದಲು ಮತ್ತೆ ಅಸ್ಸಾಂಗೆ ಹೋಗಿ ೨೦೧೭ರ ನವೆಂಬರ್‌ನಲ್ಲಿ ವಾಪಸ್ ಆಗಿದ್ದ.
ಪುಡ್ ಡಿಲೆವರಿ ಕೆಲಸ:
ಗಾರ್ಮೆಂಟ್ಸ್, ಸೆಕ್ಯೂರಿಟಿ ಗಾರ್ಡ್ ಹೀಗೆ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡಿ ಕೆಲ ತಿಂಗಳ ಹಿಂದೆ ಆತನ ತಾಯಿ ನಿಧನರಾಗಿದ್ದು ಅಸ್ಸಾಂಗೆ ಹೋಗಿ ವಾಪಸ್ ಬಂದು ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಗಾರ್ಮೆಂಟ್ಸ್ ಒಂದರಲ್ಲಿ ೩ ತಿಂಗಳು ಕೆಲಸ ಮಾಡಿದ್ದಾನೆ. ಅಲ್ಲಿ ಮಾರ್ಕ್ಸ್ ಕಾರ್ಡ್ ಕೇಳಿದ್ದಾರೆ ಎಂಬ ಕಾರಣಕ್ಕೆ ಪಿಯುಸಿ ಓದಲು ಮತ್ತೆ ಅಸ್ಸಾಂಗೆ ಹೋಗಿ ೨೦೧೭ರ ನವೆಂಬರ್‌ನಲ್ಲಿ ವಾಪಸ್ ಆಗಿದ್ದ.
ರಾತ್ರಿ ಹೊತ್ತು ಮಾತ್ರ ಫುಡ್ ಡೆಲಿವರಿ ಕೆಲಸ ಮಾಡ್ತಿದ್ದ ಅಖ್ತರ್ ಉಳಿದ ಸಮಯದಲ್ಲಿ ವಿವಿಧ ಉಗ್ರ ಸಂಘಟನೆಗಳ ಮುಖ್ಯಸ್ಥರ ಭಾಷಣಗಳನ್ನು ಕೇಳಲು ಶುರುಮಾಡಿದ್ದ. ಆ ಭಾಷಣಗಳಿಂದ ಪ್ರೇರೇಪಿತನಾಗಿ, ಉಗ್ರ ಸಂಘಟನೆ ಸೇರಲು ತೀರ್ಮಾನ ಮಾಡಿದ್ದ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತೆರಳಲು ಸಿದ್ಧತೆ:
ತನ್ನ ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆಂದು ಹೇಳುತ್ತಾ ಧರ್ಮ ಯುದ್ಧದಲ್ಲಿ ಭಾಗಿಯಾಗುವಂತೆ ಯುವಕರನ್ನು ಹುರಿದುಂಬಿಸುತಿದ್ದ. ಉಗ್ರ ಸಂಘಟನೆಗಳ ಮೇಲೆ ಅಪಾರ ಒಲವು ಹೊಂದಿದ್ದ ಅಖ್ತರ್ ಇದೇ ವರ್ಷದಲ್ಲಿ ಅಫ್ಘಾನಿಸ್ತಾನಕ್ಕೆ ಹೋಗಲು ಸಿದ್ದತೆ ನಡೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಧರ್ಮದ ಉಳಿವಿಗಾಗಿ ’ಜಿಹಾದ್’ ಯುದ್ಧ ಮಾಡಬೇಕು. ಈ ಮೂಲಕ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಸಾಮಾಜಿಕ ಜಾಲತಾಣಗಳ ಗುಂಪಿನ ಸದಸ್ಯರಿಗೆ ಆರೋಪಿ ಕರೆ ನೀಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈತ ಈವರೆಗೆ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ಸಂಘಟನೆಗೆ ಸೇರುವತ್ತ ಭಾರಿ ಉತ್ಸುಕತೆ ತೋರಿದ್ದಾನೆ. ಇದರಂತೆ ಕೋಲ್ಕತ್ತಾದ ಓರ್ವ, ಬಾಂಗ್ಲಾದೇಶದ ಇಬ್ಬರು ಹಾಗೂ ತಾನು ಸೇರಿ ಒಟ್ಟು ನಾಲ್ವರು ಆಫ್ಫಾನಿಸ್ತಾನಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ