
ಕಾಶ್ಮೀರ,ಆ.೫- ದಕ್ಷಿಣ ಕಾಶ್ಮೀರದಲ್ಲಿ ಎನ್ಕೌಂಟರ್ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಅರಣ್ಯ ಪ್ರದೇಶವನ್ನು ಸುತ್ತುವರೆದು ಶೊಧ ಕಾರ್ಯಾಚರಣೆ ಕೈಗೊಂಡಿದ್ದರು.
ಈ ವೇಳೆ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎನ್ಕೌಂಟರ್ ಆರಂಭಿಸಿದ ಸೇನಾ ಸಿಬ್ಬಂದಿ ಮೇಲೆ ಅವಿತುಕುಳಿತ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಯಿಂದ ಮೂವರು ಭದ್ರಾತಾ ಪಡೆ ಸಿಬ್ಬಂದಿ ಗಂಭೀರವಾಗಿ ಗಾಯ ಗೊಂಡಿದ್ದರು. ಆದರೆ, ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್ನ ಹಲಾನ್ನ ಪ್ರದೇಶಗಳಲ್ಲಿ ಭಯೋತ್ಪಾದಕರ ಸುಳಿವು ಸಿಕ್ಕ ನಂತರ ಅವರನ್ನು ಸೆದೆಬಡಿಯಲೆಂದು ೦೪ ಆಗಸ್ಟ್ ೨೩ ರಂದು ಸೇನೆ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೂವರು ಸೈನಿಕರು ಗಾಯಗೊಂಡು ಹುತಾತ್ಮರಾಗಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಈಗಿರುವ ಭದ್ರತಾ ಪಡೆಯನ್ನು ಹೆಚ್ಚಿಸಿದ್ದು, ಶೋಧ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲಾಗಿದೆ ಎಂದು ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಟ್ವೀಟ್ ನಲ್ಲಿ ತಿಳಿಸಿದೆ.