ಉಗ್ರರಿಗೆ ನೆರವು ದಾವೂದ್ ಸಂಬಂಧಿ ಸಲೀಂ ಬಂಧನ

ಮುಂಬಯಿ,ಆ.೫- ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಮಾಹಿತಿ ಆಧರಿಸಿ ದಾವೂದ್ ಇಬ್ರಾಹಿಂನ ಸಂಬಂಧಿ ಸಲೀಂ ಖುರೇಷಿ ಅಲಿಯಾಸ್ ‘ಸಲೀಂ ಫ್ರೂಟ್’ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಲೀಂ ಖುರೇಷಿ ದಾವೂದ್‌ನ ಭಾವ ಎನ್ನಲಾಗಿದ್ದು, ಛೋಟಾ ಶಕೀಲ್‌ನ ಆಪ್ತ ಸಹಾಯಕನೂ ಆಗಿದ್ದ ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.
‘ಡಿ ಕಂಪನಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದರಲ್ಲಿ ಖುರೇಶಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ. ಚೋಟಾ ಶಕೀಲ್ ಹೆಸರಲ್ಲಿ ಆಸ್ತಿ ವ್ಯಾಜ್ಯಗಳು ಮತ್ತು ವಿವಾದ ಇತ್ಯರ್ಥಗಳಿಂದ ಖುರೇಷಿ ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡಿದ್ದ’ ಎಂದು ಎನ್‌ಐಎ ಹೇಳಿದೆ.ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಂದ ನಡೆಯುತ್ತಿದ್ದ ಕಳ್ಳಸಾಗಣೆ, ಮಾದಕ ದ್ರವ್ಯ ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ, ನಕಲಿ ಕರೆನ್ಸಿ ಚಲಾವಣೆ, ಭಯೋತ್ಪಾದನೆಗೆ ಹಣ ಸಂಗ್ರಹ ಮತ್ತು ಲಷ್ಕರ್-ಎ-ತಯಬಾ, ಜೈಶ್ ಎ ಮೊಹಮ್ಮದ್, ಅಲ್ ಕೈದಾ ಸೇರಿದಂತೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಕ್ರಿಯ ನಂಟು, ಭಯೋತ್ಪಾದಕ ಮತ್ತು ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಫೆಬ್ರುವರಿ ೩ ರಂದು ಪ್ರಕರಣವನ್ನು ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಮೇ ೧೨ ರಂದು ಆರಿಫ್ ಅಬೂಬಕರ್ ಶೇಖ್ (೫೯) ಹಾಗೂ ಶಬ್ಬೀರ್ ಅಬೂಬಕರ್ ಶೇಖ್ (೫೧)ನನ್ನು ಎನ್‌ಐಎ ಬಂಧಿಸಿತ್ತು. ಈ ಇಬ್ಬರೂ ಮುಂಬೈಯ ಪಶ್ಚಿಮ ಉಪನಗರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ದಾವೂದ್ ಸಹಚರರ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದರು.