ಉಗ್ರರಿಗೆ ಕೈನಿಂದ ಪ್ರೇಮಪತ್ರ: ಪ್ರಧಾನಿ ವಾಗ್ದಾಳಿ

ರಾಂಚಿ,ಮೇ.೪- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು, ಭಯೋತ್ಪಾದಕರು ಗುಂಡು ಹಾರಿಸುತ್ತಿದ್ದರೂ ಸರ್ಕಾರ ಅವರಿಗೆ ಪ್ರೇಮ ಪತ್ರ ಕಳುಹಿಸುತ್ತಿತು. ನವಭಾರತದಲ್ಲಿ ಹಾಗಿಲ್ಲ. ಅವರ ಮನೆಯೊಳಗೆ ನುಗ್ಗಿ ಹತ್ಯೆ ಮಾಡಲಾಗುತ್ತಿದೆ. ಇದಕ್ಕೆ ಬಾಲಾಕೋಟ್ ವೈಮಾನಿಕ ದಾಳಿಯೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಆಗಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ. ಬಲಿಷ್ಠ ಭಾರತಕ್ಕೆ ನಿರ್ಮಾಣಕ್ಕೆ ಸುಭದ್ರ ಸರ್ಕಾರ ರಚನೆಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್‌ನ ಪಲುಮುದಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು ದುರ್ಬಲ ಕಾಂಗ್ರೆಸ್ ಸರ್ಕಾರ ಪ್ರಪಂಚದಾದ್ಯಂತ ಅಳುತ್ತಿದ್ದ ಕಾಲವಿತ್ತು, ಈಗ ಪಾಕಿಸ್ತಾನ ಪ್ರಪಂಚದಾದ್ಯಂತ ’ಬಚಾವೋ, ಬಚಾವೋ’ ಎಂದು ಕೂಗುತ್ತಿದೆ ಅದಕ್ಕೆ ನೀವು ನನಗೆ ಕೊಟ್ಟ ಶಕ್ತಿಯೇ ಕಾರಣ ಎಂದು ತಿಳಿಸಿದ್ದಾರೆ.
ಮೋದಿ ಹುಟ್ಟಿರುವುದು ಮಿಷನ್‌ಗಾಗಿ
ಜೆಎಂಎಂ-ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಮೂಲಕ ಅಪಾರ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು “ಮೋದಿ ಹುಟ್ಟಿರುವುದು ಮಿಷನ್‌ಗಾಗಿ” ಎಂದು ಹೇಳಿದ್ದಾರೆ.
ಕಾಂಗ್ರೆಸ್-ಜೆಎಂಎಂ ನಾಯಕರು ತಮ್ಮ ವಾರಸುದಾರರಿಗೆ ಎಲ್ಲವನ್ನೂ ಸಂಗ್ರಹಿಸುತ್ತಿದ್ದಾರೆ. ನನ್ನ ಬಳಿ ಸ್ವಂತ ಸೈಕಲ್ ಕೂಡ ಇಲ್ಲ. ನನ್ನ ವಾರಸುದಾರರು ಎಲ್ಲರೂ ನೀವೇ, ಜೊತೆಗೆ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನನ್ನ ವಾರಸುದಾರರು ಅವರಿಗಾಗಿ ವಿಕಸಿತ ಭಾರತ ನಿರ್ಮಾಣ ನನ್ನ ಗುರಿ ಎಂದು ತಿಳಿಸಿದ್ದಾರೆ.
ಬಡತನದಲ್ಲಿ ಬದುಕಿದ್ದೇನೆ. ಬಡವನ ಜೀವನ ಎಷ್ಟು ತೊಂದರೆಯಾಗಿದೆ ಎಂದು ತಿಳಿದಿದೆ. ಕಳೆದ ೧೦ ವರ್ಷಗಳಲ್ಲಿ ಜಾರಿಗೆ ತಂದ ಎಲ್ಲಾ ಯೋಜನೆಗಳುಜೀವನದ ಅನುಭವದಿಂದ ಪ್ರೇರಿತವಾಗಿವೆ.ಫಲಾನುಭವಿಗಳನ್ನು ಭೇಟಿ ಮಾಡಿದಾಗ ನನಗೆ ಸಂತೋಷದ ಕಣ್ಣೀರು ಬರುತ್ತದೆ ಎಂದು ಹೇಳಿದ್ದಾರೆ.
ಈ ಕಣ್ಣೀರು ಮಾತ್ರ ಬಡತನದ ಹೋರಾಟವನ್ನು ಹತ್ತಿರದಿಂದ ನೋಡಿದವರಿಗೆ ಅರ್ಥವಾಗಲಿದೆ. ಹೊಗೆಯಿಂದ ಕೆಮ್ಮುತ್ತಿರುವ ತಾಯಿಯನ್ನು ನೋಡದವನಿಗೆ ಈ ಕಣ್ಣೀರು ಅರ್ಥವಾಗುವುದಿಲ್ಲ ಬದಲಾಗಿ ಅವರಲ್ಲಿ ಹತಾಶ ಮನೋಭಾವ ಕಾಡುತ್ತದೆ ಎಂದಿದ್ಧಾರೆ
೨೦೧೪ರಲ್ಲಿ ನೀವು ಹಾಕಿದ ಒಂದು ವಿಶ್ವವೇ ಭಾರತದ ಪ್ರಜಾಪ್ರಭುತ್ವಕ್ಕೆ ನಮನ ಸಲ್ಲಿಸಿತು.ಅಲ್ಲದೆ ಕಾಂಗ್ರೆಸ್ ನ ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ಸಹಕಾರಿಯಾಯಿತು ಎಂದಿದ್ದಾರೆ.
ನಕ್ಸಲರಿಂದ ಮಕ್ಕಳ ರಕ್ಷಣೆ
ಒಡಿಶಾ, ಛತ್ತೀಸ್‌ಗಢ, ಬಿಹಾರ, ಆಂಧ್ರಪ್ರದೇಶ, ಪಶುಪತಿಯಿಂದ ತಿರುಪತಿಯವರೆಗೆ ಪ್ರತಿದಿನ ನಕ್ಸಲೀಯರು ಭಯೋತ್ಪಾದನೆ ಹರಡುತ್ತಿದ್ದರು ಅವರಿಂದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಮಕ್ಕಳು ಕೆಟ್ಟ ಸಹವಾಸದಿಂದ ಪ್ರಭಾವಿತರಾಗಿ ಆಯುಧ ಹಿಡಿದು ಕಾಡಿನ ಕಡೆಗೆ ಓಡುತ್ತಿದ್ದರು. ಈಗ ನಿಮ್ಮ ಒಂದು ಮತ ಚಿಕ್ಕ ಮಕ್ಕಳನ್ನು ಉಳಿಸಿದೆ ಮತ್ತು ಅವರ ತಾಯಂದಿರ ಭರವಸೆ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.