ಉಗ್ರನ ಪತ್ನಿ ಪಾಕ್ ಪಿಎಂಗೆ ವಿಶೇಷ ಸಲಹೆಗಾರ್ತಿ

ಇಸ್ಲಾಮಾಬಾದ್,ಅ.೧೮-ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ರಚನೆಯಾದ ಉಸ್ತುವಾರಿ ಸರ್ಕಾರದಲ್ಲಿ ಭಯೋತ್ಪಾದಕನ ಪತ್ನಿಗೆ ಆದ್ಯತೆ ನೀಡಲಾಗಿತ್ತು. ಪಾಕಿಸ್ತಾನದ ಕ್ಯಾಬಿನೆಟ್ ಅವರನ್ನು ಉಸ್ತುವಾರಿ ಪ್ರಧಾನ ಮಂತ್ರಿಯ ಸಲಹೆಗಾರರನ್ನಾಗಿ ಆಯ್ಕೆ ಮಾಡಿದೆ. ಕಿರಿಯ ಸಚಿವ ಸ್ಥಾನಮಾನ ಕೊಡಲಾಗಿದೆ. ಇದರೊಂದಿಗೆ ಈ ಭಯೋತ್ಪಾದಕನ ಪತ್ನಿ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣದ ಕುರಿತು ಪ್ರಧಾನಿಗೆ ಸಲಹೆ ನೀಡಲಿದ್ದಾರೆ. ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಅವರ ಪತ್ನಿ ಮುಶಾಲ್ ಹುಸೇನ್ ಮುಲ್ಲಿಕ್ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ.
ಏತನ್ಮಧ್ಯೆ, ಯಾಸಿನ್ ಮಲಿಕ್ ಭಯೋತ್ಪಾದನೆಗೆ ಹಣ ನೀಡಿದ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ನ್ಯಾಯಾಲಯವು ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ,ಎನ್‌ಐಎ ಮರಣದಂಡನೆಗಾಗಿ ವಾದಿಸುತ್ತಿದೆ. ಯಾಸಿನ್ ಮಲಿಕ್ ಈ ಪ್ರಕರಣದ ವಿಚಾರಣೆಗೆ ಇದೇ ತಿಂಗಳ ೯ರಂದು ವಿಡಿಯೋ ಲಿಂಕ್ ಮೂಲಕ ಹಾಜರಾಗಿದ್ದರು. ಮುಶಾಲ್ ಹುಸೇನ್ ಮುಲ್ಲಿಕ್ ಅವರು ೨೦೦೯ ರಲ್ಲಿ ಭಯೋತ್ಪಾದಕ ಯಾಸಿನ್ ಮಲಿಕ್ ಅವರನ್ನು ವಿವಾಹವಾದರು.

ಅನ್ವರ್-ಉಲ್-ಹಕ್ ಕಾಕರ್ ಪ್ರಸ್ತುತ ಪಾಕಿಸ್ತಾನದಲ್ಲಿ ಉಸ್ತುವಾರಿ ಸರ್ಕಾರದ ಆಡಳಿತವಿದೆ. ಅಧ್ಯಕ್ಷ ಆರಿಫ್ ಅಲ್ವಿ ಇತ್ತೀಚೆಗೆ ಸಂಸತ್ತನ್ನು ವಿಸರ್ಜಿಸಿದರು ಮತ್ತು ಅನ್ವರ್ ಅವರು ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಿಗದಿತ ಅವಧಿಯೊಳಗೆ (೯೦ ದಿನ) ಚುನಾವಣೆ ನಡೆಸಲು ಉಸ್ತುವಾರಿ ಸರ್ಕಾರ ಸಿದ್ಧವಾಗಿದೆ. ಆದರೆ, ಈ ಗಡುವಿನೊಳಗೆ ಚುನಾವಣೆ ನಡೆಸುವ ಪರಿಸ್ಥಿತಿ ಇಲ್ಲ ಎಂಬುದು ಪಾಕಿಸ್ತಾನದ ರಾಜಕೀಯ ವಲಯಗಳ ಅಭಿಪ್ರಾಯ. ಡಿಲಿಮಿಟೇಶನ್ ಪ್ರಕ್ರಿಯೆ ಮುಂದುವರಿದಿದ್ದು, ಚುನಾವಣೆ ನಡೆಸಲು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.