ಉಗಾಂಡಾದಲ್ಲಿ ದೋಣಿ ದುರಂತ ೨೬ ಸಾವು

ಉಗಾಂಡಾ ಡಿಸೆಂಬರ್ ೨೬. ಉಗಾಂಡಾ ಹಾಗೂ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಗಡಿ ಪ್ರದೇಶದಲ್ಲಿನ ಲೇಕ್ ಆಲ್ಬರ್ಟ್ ನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ ೨೬ಮಂದಿ ಸಾವನ್ನಪ್ಪಿದ್ದಾರೆ.

ಬಿರುಗಳಿ ಬೀಸಿದ್ದರಿಂದ ದೋಣಿ ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ. ದೋಣಿಯಲ್ಲಿ ಡಜನ್ಗಟ್ಟಲೆ ಜನರು ಪ್ರಯಾಣಿಸುತ್ತಿದ್ದರು. ದೋಣಿ ದುರಂತದಲ್ಲಿ ಕನಿಷ್ಠ ೨೧ ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುರಕ್ಷತಾ ಕ್ರಮಗಳ ಕೊರತೆ ಹಾಗೂ ಆಗಿಂದಾಗೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಈ ಪ್ರದೇಶದಲ್ಲಿ ದೋಣಿ ದುರಂತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಉಗಾಂಡದ ಎರಡು ಪ್ರದೇಶಗಳಿಗೆ ದೋಣಿ ಪ್ರಯಾಣಿಕರನ್ನು ಸಾಗಿಸುತ್ತಿತ್ತು. ಈ ಸಂದರ್ಭದಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ದೋಣಿ ಪಲ್ಟಿ ಹೊಡೆದಿದೆ ಎಂದು ಅವರು ಹೇಳಿದ್ದಾರೆ.

ದುರಂತದಲ್ಲಿ ಬದುಕಿ ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗಿದೆ. ಆದರೆ ಬದುಕು ಉಳಿದವರ ಸಾಧ್ಯತೆ ತೀರಾ ಕಡಿಮೆ ಎಂದು ರಕ್ಷಣಾ ಕಾರ್ಯಪಡೆ ಸಿಬ್ಬಂದಿ ತಿಳಿಸಿದ್ದಾರೆ.