ಉಕ್ರೇನ್ ೨ನೇ ಅತೀ ದೊಡ್ಡ ವಿದ್ಯುತ್ ಸ್ಥಾವರ ಕೈವಶ

ಕೀವ್, ಜು.೨೮- ಕಳೆದ ಐದು ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಇದೀಗ ಉಕ್ರೇನ್‌ನ ದಕ್ಷಿಣ ಭಾಗದ ಮೂರು ಭಾಗಗಗಳಲ್ಲಿ ಮತ್ತಷ್ಟು ತನ್ನ ಸೇನೆಯನ್ನು ವಿಸ್ತರಿಸಿದೆ. ಅದೂ ಅಲ್ಲದೆ ಉಕ್ರೇನ್‌ನ ಎರಡನೇ ಅತಿದೊಡ್ಡ ವಿದ್ಯುತ್ ಸ್ಥಾವರವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹಿರಿಯ ಸಲಹೆಗಾರರಾದ ಒಲೆಕ್ಸಿ ಅರಿಸ್ಟೋವಿಚ್ ತಿಳಿಸಿದ್ದಾರೆ.
ಪೂರ್ವ ಉಕ್ರೇನ್‌ನಲ್ಲಿರುವ ಕಲ್ಲಿದ್ದಲು ಆಧಾರಿತ, ಸೋವಿಯತ್ ಕಾಲದ ವುಹ್ಲೆಹಿರ್ಸ್ಕ್ ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡ ಬಗ್ಗೆ ರಷ್ಯಾ ಬೆಂಬಲಿತ ಪಡೆಗಳು ಕೂಡ ಬಹಿರಂಗಪಡಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಿಸ್ಟೋವಿಚ್, ನಿರ್ಣಾಯಕ ಪೂರ್ವ ಡೊನೆಟ್ಸ್ಕ್ ಕೈಗಾರಿಕಾ ಪ್ರದೇಶದಲ್ಲಿ ಉಕ್ರೇನ್‌ನ ಆಕ್ರಮಣಕಾರಿ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಸಲುವಾಗಿ ಯುದ್ಧತಂತ್ರದ ದಾಳಿಗಳನ್ನು ಬಳಸಿಕೊಂಡು ರಷ್ಯಾವು ಆಕ್ರಮಣಕಾರಿ ರಣನೀತಿಯಿಂದ ಕಾರ್ಯತಂತ್ರದ ರಕ್ಷಣೆಗೆ ಬದಲಾಗುತ್ತಿರುವಂತೆ ತೋರುತ್ತಿದೆ. ಅವರ ಪುಟ್ಟ ಆಯಕಟ್ಟಿನ ಲಾಭವನ್ನು ಸಾಧಿಸಿದ್ದು, ಅವರು ವುಹ್ಲೆಹಿರ್ಸ್ಕ್ ವಿದ್ಯುತ್ ಘಟಕ ವಶಪಡಿಸಿಕೊಂಡಿದ್ದಾರೆ. ಇದರ ಪರಿಣಾಮ ನಾವು ನಮ್ಮ ಪ್ರದೇಶಗಳನ್ನು ಸ್ವತಂತ್ರಗೊಳಿಸಲು ಸಾಧ್ಯವಾಗುತ್ತಿಲ್ಲ. ರಷ್ಯಾ ದಕ್ಷಿಣದಲ್ಲಿ ಮೆಲಿಟೊಪೋಲ್ ಮತ್ತು ಝಪೊರಿಝಿಯಾ ಪ್ರದೇಶಗಳಿಗೆ ಸೈನ್ಯವನ್ನು ಕಳುಹಿಸಲಿದೆ ಎಂದು ಅವರು ತಿಳಿಸಿದ್ದಾರೆ.